ಹರಿದ್ವಾರ( ಉತ್ತರಾಖಂಡ): ಡ್ರೀಮ್ ಇಲೆವೆನ್‌ನಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಗೆದ್ದ ಖುಷಿಯಲ್ಲಿ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಭಾರಿ ಅವಾಂತರ ಸೃಷ್ಟಿಸಿರುವ ಘಟನೆ ಇಲ್ಲಿ ನಡೆದಿದೆ. ಕುಡಿದ ನಶೆಯಲ್ಲಿ ಗಲಾಟೆ ಮಾಡುತ್ತಿದ್ದ ವ್ಯಕ್ತಿಯ ಕಾಟ ತಡೆಯಲಾಗದೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಸಿಡಕುಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹೇಶ್ ಸಿಂಗ್ ಧಾಮಿ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಮಹೇಶ್ ಈತ ತಾನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸಂಬಂಧಿ ಎಂದು ಪೊಲೀಸರಿಗೇ ಬೆದರಿಕೆ ಬೇರೆ ಹಾಕಿದ್ದಾರೆ. ಸದ್ಯ ಪೊಲೀಸರು ಈ ವ್ಯಕ್ತಿಯ ವಿರುದ್ಧ ಶಾಂತಿ ಭಂಗದ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಡಕುಲ್ ಪೊಲೀಸ್ ಠಾಣೆಯ ಮಾಹಿತಿಯ ಪ್ರಕಾರ, ಸಿಡಕುಲ್ ಪ್ರದೇಶದ ನಿವಾಸಿ ಮಹೇಶ್ ಸಿಂಗ್ ಧಾಮಿ ಎಂಬ ವ್ಯಕ್ತಿ ಡ್ರೀಮ್ ಇಲೆವೆನ್‌ನಲ್ಲಿ ಒಂದು ಕೋಟಿ ರೂಪಾಯಿ ಗೆದ್ದಿದ್ದು, ತೆರಿಗೆ ಕಡಿತಗೊಳಿಸಿ ಆತನ ಖಾತೆಗೆ ಸುಮಾರು 96 ಲಕ್ಷ ರೂಪಾಯಿ ಬಂದಿದೆ. ಇದೇ ಖುಷಿಯಲ್ಲಿ ಕಂಠಪೂರ್ತಿ ಕುಡಿದ ಆತ ಗಲಾಟೆ ಶುರು ಮಾಡಿದ್ದಾನೆ. ಗಲಾಟೆಯಿಂದ ಬೇಸತ್ತು ಯಾರೋ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಆತನನ್ನು ಹಿಡಿದು ಠಾಣೆಗೆ ಕರೆತಂದಿದ್ದಾರೆ.
ಆರೋಪಿಯು ಕುಡಿದ ಅಮಲಿನಲ್ಲಿ ಪೊಲೀಸರಿಗೆ ಸಮವಸ್ತ್ರ ತೆಗೆಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಮೊದಲಿಗೆ ಪೊಲೀಸರು ಆತನನ್ನು ಸಾಕಷ್ಟು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಆತ ಯಾವುದಕ್ಕೂ ಬಗ್ಗದಿದ್ದಾಗ ಶಾಂತಿ ಕದಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಸಲಾಗಿದೆ ಎಂದು ಇನ್ಸಪೆಕ್ಟರ್ ರಮೇಶ್ ತನ್ವಾರ್ ತಿಳಿಸಿದ್ದಾರೆ. ಮಹೇಶ್ ಸಿಂಗ್ ಧಾಮಿ ರೋಶನಾಬಾದ್‌ನ ನವೋದಯ ನಗರದ ಡಿಫೆನ್ಸ್ ಕಾಲೋನಿ ನಿವಾಸಿಯಾಗಿದ್ದಾರೆ.