ರಾಂಚಿ, ಜಾರ್ಖಂಡ್: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದಂತೆ ಕಾಣುತ್ತಿದೆ. ದುಮ್ಕಾ ಹುಡುಗಿ ಅಂಕಿತಾ ಸಿಂಗ್ ಕೊಲೆ ಮಾಸುವ ಮುನ್ನವೇ ಮತ್ತೊಂದು ಹೇಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಹೌದು.. ಈಗ ಛತ್ರದ ಹುಡುಗಿಯನ್ನು ಕೊಲ್ಲಲು ಯತ್ನಿಸಿದ ಪ್ರಕರಣವು ಮುನ್ನೆಲೆಗೆ ಬಂದಿದೆ. ಒನ್ ಸೈಡ್ ಲವ್ ಮಾಡುತ್ತಿದ್ದ ಭಗ್ನ ಪ್ರೇಮಿ 17 ವರ್ಷದ ಬಾಲಕಿ ಮೇಲೆ ಆ್ಯಸಿಡ್ ಎರಚಿ ಅಟ್ಟಹಾಸ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.
ಮಲಗಿದ್ದ ಹುಡುಗಿ ಮೇಲೆ ಆ್ಯಸಿಡ್ ಎರಚಿದ ಭಗ್ನ ಪ್ರೇಮಿ: ಛತ್ರದ ಹಂಟರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಧೇಬು ಗ್ರಾಮದ ನಿವಾಸಿ ಸಂತ್ರಸ್ತೆಯ ತಾಯಿ ದೇವಂತಿ ದೇವಿ ನೀಡಿರುವ ದೂರಿನ ಪ್ರಕಾರ, ಆಗಸ್ಟ್ 4ರ ರಾತ್ರಿ ನನ್ನ 17 ವರ್ಷದ ಮಗಳು ಮನೆಯಲ್ಲಿ ಮಲಗಿದ್ದಳು. ಆಗ ಸಂದೀಪ್ ಭಾರ್ತಿ ಎಂಬ ಹುಡುಗ ಆಕೆಯ ಮೇಲೆ ಆ್ಯಸಿಡ್ ಎರಚಿ ಕೊಲೆ ಮಾಡಲು ಯತ್ನಿಸಿದ್ದ.
ಕೂಡಲೇ ನಮ್ಮ ಮಗಳನ್ನು ತರಾತುರಿಯಲ್ಲಿ ಗಯಾಗೆ ಕರೆದೊಯ್ದು, ಆಸ್ಪತ್ರೆಗೆ ದಾಖಲಿಸಿದ್ದೇವೆ. ಆದರೆ, ಆಕೆಯ ಸ್ಥಿತಿ ಗಂಭೀರವಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್‌ಗೆ ಕರೆದುಕೊಂಡು ಬಂದಿದ್ದೇವೆ ಎಂದು ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆಸ್ಪತ್ರೆಯಲ್ಲಿ ಬಾಲಕಿ ನರಳಾಟ:ಮಗಳ ಸ್ಥಿತಿ ಚಿಂತಜನಕವಾಗಿದೆ. ಆ್ಯಸಿಡ್ನಿಂದ ದಾಳಿಗೊಳಗಾದ ನಮ್ಮ ಮಗಳ ನರಳಾಟ ನೋಡಲು ಸಾಧ್ಯವಾಗುತ್ತಿಲ್ಲ. ಅಂಕಿತಾ ಅವರ ಆರೋಪಿಗಳಿಗೆ ಶಿಕ್ಷೆಯಾಗುವ ನಿರೀಕ್ಷೆಯಂತೆಯೇ ಸಂದೀಪ್ ಭಾರ್ತಿಗೂ ಶಿಕ್ಷೆಯಾಗಬೇಕು. ರಾಜ್ಯ ಸರ್ಕಾರ ಅಂಕಿತಾ ಮತ್ತು ಅವರ ಕುಟುಂಬ ಸದಸ್ಯರಿಗೆ ಸಹಾಯ ಮಾಡುವ ರೀತಿಯಲ್ಲಿ ನಮ್ಮ ಮಗಳಿಗೂ ಸಹಾಯ ಮಾಡಬೇಕು ಎಂದು ದೇವಂತಿ ದೇವಿ ಸರ್ಕಾರವನ್ನು ಒತ್ತಾಯಿಸಿದರು.
ಪೊಲೀಸರ ಮೇಲೆ ಸಂತ್ರಸ್ತೆ ತಾಯಿ ಆಕ್ರೋಶ: ಮಗಳ ಸುರಕ್ಷತೆಗಾಗಿ ನಾನು ಮೊದಲೇ ಆಡಳಿತಕ್ಕೆ ಒತ್ತಾಯಿಸಿದ್ದೆ. ಆದರೆ, ಪೊಲೀಸರು ಈ ಬಗ್ಗೆ ಗಮನ ಹರಿಸಲಿಲ್ಲ. ಕೊನೆಗೂ ಆರೋಪಿ ಸಂದೀಪ್ ಭಾರ್ತಿ ಆ್ಯಸಿಡ್ ಎರಚಿದ್ದಾನೆ. ನನ್ನ ಮಗಳಿಗೂ ನ್ಯಾಯ ಸಿಗಬೇಕು ಎಂದು ದೇವಂತಿ ದೇವಿ ಆಗ್ರಹಿಸಿದರು. ಸಂದೀಪ್ ಭಾರ್ತಿ ನನ್ನ ಸಹೋದರಿಗೆ ಬಹಳ ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆಯ ಸಹೋದರ ಹೇಳಿದ್ದಾರೆ.
ಅಂಕಿತಾ ಸಿಂಗ್ ಕೊಲೆ ಪ್ರಕರಣ: ದುಮ್ಕಾ ಹುಡುಗಿ ಅಂಕಿತಾ ಸಿಂಗ್ ಕೊಲೆ ಪ್ರಕರಣ ಈಗ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಾಲಕಿ ಅಂಕಿತಾ ಸಿಂಗ್ಗೆ ಸುಮಾರು 15 ದಿನಗಳು ಹಿಂಬಾಲಿಸಿ ಚೇಷ್ಠೆ ಮಾಡುತ್ತಿದ್ದನು. ಬಳಿಕ ಬೇರೆಯವರಿಂದ ಅಂಕಿತಾ ಫೋನ್ ನಂಬರ್ ತೆಗೆದುಕೊಂಡು ಫೋನ್ ಮೂಲಕ ಶಾರೂಖ್ ಚಿತ್ರಹಿಂಸೆ ನೀಡಿದ್ದಾನೆ.
ಆಗಸ್ಟ್ 22ರ ರಾತ್ರಿ ನನ್ನ ಮಾತು ಕೇಳದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತ ಅಂಕಿತ ತನ್ನ ತಂದೆಗೆ ಈ ವಿಷಯದ ಬಗ್ಗೆ ಹೇಳಿದ್ದಾಳೆ. ತಂದೆ ಸಹ ಬೆಳಗ್ಗೆ ಅವನನ್ನು ವಿಚಾರಿಸುವುದಾಗಿ ಹೇಳಿದ್ದಾರೆ. ಆದರೆ ಆಗಸ್ಟ್ 23ರಂದು ಬೆಳಗ್ಗೆ ನಾಲ್ಕೈದು ಗಂಟೆಗೆ ಅಂಕಿತ ಮೇಲೆ ಶಾರುಖ್ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ. ಕೂಡಲೆ ಅಂಕಿತಾಳನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದರು.
ಮೈತುಂಬಾ ಅಂಕಿತಾಳಿಗೆ ಸುಟ್ಟಗಾಯಗಳಾಗಿದ್ದು, ವಿಡಿಯೋ ಮೂಲಕ ಆರೋಪಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಐದು ದಿನಗಳ ಕಾಲ ಸಾವು - ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಅಂಕಿತ ಬದುಕುಳಿಯಲಿಲ್ಲ. ಅಂಕಿತಾ ಅಂತ್ಯಕ್ರಿಯೆಯಲ್ಲಿ ದುಮ್ಕಾ ಬಿಜೆಪಿ ಸಂಸದ ಸುನೀಲ್ ಸೋರೆನ್, ಉಪ ಅಭಿವೃದ್ಧಿ ಆಯುಕ್ತ ಕರ್ಣ ಸತ್ಯಾರ್ಥಿ, ಡಿಎಸ್ಪಿ ವಿಜಯಕುಮಾರ್ ಸೇರಿದಂತೆ ಹಲವು ಆಡಳಿತ ಅಧಿಕಾರಿಗಳು, ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಜನಸಾಮಾನ್ಯರು ಭಾಗಿಯಾಗಿದ್ದರು.
ಓದಿ:ಬೆಂಗಳೂರಲ್ಲಿ ಮತ್ತೆ ಆ್ಯಸಿಡ್ ದಾಳಿ ಪ್ರಕರಣ: ಆರೋಪಿ ಬಂಧನ, ಆ್ಯಸಿಡ್ ಬ್ಯಾನ್ಗೆ ಮುಂದಾದ ಗೃಹ ಸಚಿವರು