ಸುಪೌಲ್ (ಬಿಹಾರ): ಸಾಲದ ಹಣವನ್ನು ವ್ಯಕ್ತಿಯೊಬ್ಬರು ಮರುಪಾವತಿಸಿಲ್ಲ ಎಂಬ ಕಾರಣಕ್ಕೆ, ಕೆಲ ಯುವಕರು ಆತನ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ. ದಾಳಿಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲೆಯ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ತನಿಖೆ ಆರಂಭಿಸಿದ್ದು, ಜಿಲ್ಲೆಯ ಕಿಶನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕತ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಾಯಾಳು ಅರ್ಜುನ್ ಮುಖಿ ಮೇಲೆ ಅದೇ ಗ್ರಾಮದ ಗಣೇಶ ಸ್ವರ್ಣಕರ್ ಹಾಗೂ ಅವರ ಪುತ್ರಿ ಆ್ಯಸಿಡ್ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೇವಲ 950 ರೂಪಾಯಿ ಸಾಲವನ್ನು ಸಂತ್ರಸ್ತ ಯುವಕ ಪಡೆದಿದ್ದ. ಈ ಹಣವನ್ನು ಕೊಡದಿದ್ದಕ್ಕೆ ಆ್ಯಸಿಡ್ ದಾಳಿ ನಡೆಸಲಾಗಿದೆ ಎನ್ನಲಾಗ್ತಿದೆ.