ಲಖನೌ(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸ್ವಾಮಿ ಪ್ರಸಾದ್ ಮೌರ್ಯ ಅವರು ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದ್ದಾರೆ. ಅವರು ತಮ್ಮ ಪತ್ನಿಯನ್ನು ಪೂಜಿಸುವ ಮತ್ತು ಗೌರವಿಸುವ ಸಂದರ್ಭವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಲಕ್ಷ್ಮಿ ದೇವಿ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಜನರು ಲಕ್ಷ್ಮಿ ದೇವಿಯನ್ನು ಪೂಜಿಸಲು ಬಯಸಿದರೆ, ಅವರು ಮೊದಲು ತಮ್ಮ ಹೆಂಡತಿಯನ್ನು ಪೂಜಿಸಬೇಕು ಮತ್ತು ಗೌರವಿಸಬೇಕು. ಅವಳು ನಿಜವಾದ ಅರ್ಥದಲ್ಲಿ ದೇವತೆ ಎಂದಿದ್ದರು.
ಈ ಬಗ್ಗೆ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ, "ಮೌರ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರ ಬಾಯಿಯಲ್ಲಿ ಪೈಲ್ಸ್ ಇದೆ. ಅವರಿಗೆ ಚಿಕಿತ್ಸೆಯ ಅಗತ್ಯವಿದೆ, ಅವರು ಮಾತನಾಡುವುದನ್ನು ನಿಷೇಧಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸುವುದಾಗಿ" ಹೇಳಿದ್ದಾರೆ.
ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದೇನು?: ಸೋಮವಾರ, ದೀಪಾವಳಿಯಂದು ಸ್ವಾಮಿ ಪ್ರಸಾದ್ ಮೌರ್ಯ ಅವರು ತಮ್ಮ ಪತ್ನಿಗೆ ತಿಲಕವನ್ನು ಹಚ್ಚುವ, ಹೂವಿನ ಹಾರವನ್ನು ಹಾಕುವ ಮತ್ತು ಉಡುಗೊರೆಗಳನ್ನು ನೀಡುವ ಚಿತ್ರಗಳನ್ನು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡು, ಇಡೀ ಪ್ರಪಂಚದ ಪ್ರತಿಯೊಂದು ಧರ್ಮ, ಜಾತಿ, ಜನಾಂಗ, ಬಣ್ಣ ಮತ್ತು ದೇಶಗಳಲ್ಲಿ ಜನಿಸಿದ ಮಗುವಿಗೆ ಎರಡು ಕೈಗಳಿವೆ, ಎರಡು ಕಾಲುಗಳು, ಎರಡು ಕಿವಿಗಳು, ಎರಡು ಕಣ್ಣುಗಳು ಮತ್ತು ಎರಡು ರಂಧ್ರಗಳಿರುವ ಮೂಗು, ತಲೆ, ಹೊಟ್ಟೆ ಮತ್ತು ಬೆನ್ನು ಮಾತ್ರ ಇದೆ. ಆದರೆ, ನಾಲ್ಕು ಕೈಗಳು, ಎಂಟು ಕೈಗಳು, ಹತ್ತು ಕೈಗಳು, ಇಪ್ಪತ್ತು ಕೈಗಳು ಮತ್ತು ಸಾವಿರ ಕೈಗಳು ಇರುವ ಮಗು ಇಲ್ಲಿಯವರೆಗೆ ಹುಟ್ಟಿಲ್ಲ. ಹಾಗಾದರೆ ಲಕ್ಷ್ಮಿಯು ನಾಲ್ಕು ಕೈಗಳಿಂದ ಹೇಗೆ ಹುಟ್ಟುತ್ತಾಳೆ? ಎಂದು ಪ್ರಶ್ನಿಸಿದ್ದರು.