ನವದೆಹಲಿ: ಲೋಕಸಭೆಯ ಕಲಾಪಕ್ಕೆ ಇಬ್ಬರು ನುಗ್ಗಿ ಭದ್ರತಾ ಲೋಪ ಎಸಗಿದ ಪ್ರಕರಣದಲ್ಲಿ ಮತ್ತಷ್ಟು ಹೊಸ ಮಾಹಿತಿಗಳು ಹೊರ ಬೀಳುತ್ತಲೇ ಇವೆ. ಈ ಇಬ್ಬರು ಆರೋಪಿಗಳು ಹೊಸ ಸಂಸತ್ತು ವೀಕ್ಷಿಸುವ ನೆಪದಲ್ಲಿ ಪಾಸ್‌ಗಳನ್ನು ಪಡೆದಿದ್ದರು. ಈ ಪಾಸ್ ಪಡೆಯಲು ಓರ್ವ ಆರೋಪಿ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಗೆ ಅಲೆಯುತ್ತಿದ್ದ ಎಂದು ವರದಿಯಾಗಿದೆ. ಮತ್ತೊಂದೆಡೆ, ಸಾಗರ್ ಶರ್ಮಾಗೆ ತಮ್ಮ ಹೆಸರಿನಲ್ಲಿ ನೀಡಿದ ಪಾಸ್ ಬಗ್ಗೆ ಲಿಖಿತ ಉತ್ತರ ನೀಡುವಂತೆ ಪ್ರತಾಪ್ ಸಿಂಹ ಅವರಿಗೆ ಲೋಕಸಭೆ ಸ್ಪೀಕರ್ ಸೂಚಿಸಿದ್ದಾರೆ.
ಅಧಿಕೃತ ಪಾಸ್ ಪಡೆದ ಆರೋಪಿಗಳಲ್ಲಿ ಒಬ್ಬರಾದ ಮನೋರಂಜನ್.ಡಿ ತನ್ನ ಸಹಚರನಾದ ಸಹ ಆರೋಪಿ ಸಾಗರ್ ಶರ್ಮಾನನ್ನು ಸಂಸದರ ಕಚೇರಿಯಲ್ಲಿ ಸ್ನೇಹಿತ ಎಂದು ಪರಿಚಯಿಸಿದ್ದ. ಅಂತೆಯೇ, ಈ ಸಂದರ್ಭದಲ್ಲಿ ಹೊಸ ಸಂಸತ್ತು ವೀಕ್ಷಿಸುವ ನೆಪದಲ್ಲಿ ಇವರಿಗೆ ಪಾಸ್‌ಗಳನ್ನು ವಿತರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಒಟ್ಟು ಮೂರು ಪಾಸ್‌ಗಳನ್ನು ನೀಡಲಾಗಿತ್ತು. ಆದಾಗ್ಯೂ, ಒಬ್ಬ ಮಹಿಳೆ ತನ್ನ ಮಗುವಿನೊಂದಿಗೆ ಬಂದಿದ್ದಳು. ಆದರೆ, ತನ್ನ ಪಾಸ್‌ನಲ್ಲಿ ಮಗುವಿನ ಹೆಸರನ್ನು ನಮೂದಿಸದ ಕಾರಣ ಆಕೆ ಹಿಂತಿರುಗಬೇಕಾಯಿತು ಎಂದು ಸಂಸದರ ಆಪ್ತ ಮೂಲಗಳು ತಿಳಿಸಿವೆ. ಆದರೆ, ಈ ಇಬ್ಬರು ಆರೋಪಿಗಳೊಂದಿಗೆ ಮಹಿಳೆಗೆ ಯಾವುದೇ ಸಂಬಂಧವಿರಲಿಲ್ಲ. ಮನೋರಂಜನ್ ಮೂರು ತಿಂಗಳಿನಿಂದ ಪಾಸ್‌ಗಾಗಿ ಪ್ರತಾಪ್ ಸಿಂಹ ಮತ್ತು ಅವರ ಕಚೇರಿಗೆ ಅಲೆದಾಡುತ್ತಿದ್ದ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ:ಆರು ಜನರಲ್ಲಿ ಇಬ್ಬರಿಗೆ ಮಾತ್ರ ಸಿಕ್ಕಿತ್ತು 'ಸಂಸತ್' ಪಾಸ್; ಸೋಷಿಯಲ್ ಮೀಡಿಯಾದಲ್ಲೇ ಸಿದ್ಧವಾಗಿತ್ತು ಪ್ಲಾನ್!