ಲಖನೌ: ಮಹಿಳಾ ಕಾನ್ಸ್ಟೇಬಲ್ಗೆ ಯುವಕ ಪಿಸ್ತೂಲ್ ಗುರಿಯಿಟ್ಟಿರುವ ಘಟನೆ ಲಖನೌದಲ್ಲಿ ನಡೆದಿದೆ. ಆಕೆಯ ಮನೆಯಲ್ಲಿಯೇ ಪಿಸ್ತೂಲ್ ಮೂಲಕ ಹಣೆಗೆ ಗುರಿಯಿಟ್ಟಿರುವ ಯುವಕ ಬಳಿಕ ಆಕೆಗೆ ಮುಖಕ್ಕೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದು, ಆಕೆಯ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಎಚ್ಚರಿಸಿದ್ದಾನೆ. ಈ ವೇಳೆ, ಮಹಿಳಾ ಕಾನ್ಸ್ಟೇಬಲ್ ಪ್ರತಿರೋಧ ವ್ಯಕ್ತಪಡಿಸಿದಾಗ ಆತ, ಮನೆ ಮುಂದೆ ನಿಲ್ಲಿಸಿದ್ದ ಸ್ಕೋಟಿಗೆ ಬೆಂಕಿ ಹಚ್ಚಿ ಹೋಗಿದ್ದಾನೆ. ಪಿಜಿಐ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಮಹಿಳೆ ತನ್ನ ಹಾಗೂ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ.
ಮುಖಕ್ಕೆ ಆ್ಯಸಿಡ್ ಹಾಕುವ ಬೆದರಿಕೆ:ಪೊಲೀಸ್ ಕ್ವಾಟ್ರಸ್ನಲ್ಲಿ ವಾಸಿಸುವ ಕಾನ್ಸ್ಟೇಬಲ್ ಮನೆಗೆ ರಾಯ್ ಬರೇಲಿಯ ಅಪರಾಧ ಹಿನ್ನೆಲೆಯುಳ್ಳ ಯುವಕ ಯೋಗೇಂದ್ರ ಪಾಂಡೆ ನುಗ್ಗಿದ್ದು, ಆಕೆಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ರಸ್ತೆಯಲ್ಲಿ ಓಡಾಡುವಾಗ ಆ್ಯಸಿಡ್ ಹಾಕುವುದಾಗಿ ಎಚ್ಚರಿಸಿದ್ದಾನೆ. ಡಿ. 23ರಂದು ಸಂತ್ರಸ್ತೆ ತನ್ನ ತಂಗಿ ಜೊತೆ ಇರಬೇಕಾದರೆ, ಆಕೆಯನ್ನು ಮನೆಯಿಂದ ಹೊರ ಬರುವಂತೆ ಯುವಕ ಕರೆದಿದ್ದಾನೆ. ಆದರೆ, ಮಹಿಳೆ ಮನೆಯಿಂದ ಹೊರ ಬರಲು ನಿರಾಕರಿಸಿದ್ದಾಳೆ.
ಈ ವೇಳೆ ಆಕೆಯ ತಂಗಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೂ ಸಂತ್ರಸ್ತೆ ಹೊರಬಾರದ ಹಿನ್ನೆಲೆ ಆಕೆಯ ಕೋಣೆಗೆ ನುಗ್ಗಿ ಪಿಸ್ತೂಲ್ನಿಂದ ಹಣೆಗೆ ಗುರಿ ಇಟ್ಟಿದ್ದಾನೆ. ಈ ವೇಳೆ ಕಾನ್ಸ್ಟೇಬಲ್ ಸ್ಥಳೀಯರನ್ನು ಎಚ್ಚರಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ.