ತಿರುವನಂತಪುರಂ(ಕೇರಳ): ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಇನ್ಮುಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಕುಟುಂಬ ಅಥವಾ ಅವರ ಹೆಸರನ್ನು ಹೇಳುವುದನ್ನು ಮುಂದುವರಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುವ ಕರೆಗಳು ಬರುತ್ತಿವೆ ಎಂದು ಸ್ವಪ್ನಾ ಆರೋಪಿಸಿದ್ದಾರೆ.
ಉದ್ದೇಶಿತ ಬೆದರಿಕೆಯ ಆಡಿಯೋ-ಕ್ಲಿಪ್ ಅನ್ನು ಬಿಡುಗಡೆ ಮಾಡಿರುವ ಸಪ್ನಾ ಸುರೇಶ್, ಈ ಹಿಂದೆಯೂ ತನಗೆ ಇದೇ ರೀತಿಯ ಬೆದರಿಕೆಗಳು ಬರುತ್ತಿದ್ದವು. ಆದರೆ, ಇಂಟರ್ನೆಟ್ ಕರೆಗಳಾಗಿದ್ದರಿಂದ ಅವುಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಇತ್ತೀಚಿನ ಸಾಮಾನ್ಯ ಕರೆಗಳು ಬರುತ್ತಿದ್ದು, ಅವರ ವಿಳಾಸವನ್ನೂ ಸಹ ಹೇಳುತ್ತಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ರವಾನಿಸಿದ್ದೇನೆ. ಅವರು ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಆಶಿಸುತ್ತೇನೆ ಎಂದಿದ್ದಾರೆ.
ನಾನು ಎಷ್ಟು ದಿನ ಬದುಕುತ್ತೇನೆ ಎಂಬುದು ನನಗೆ ತಿಳಿದಿಲ್ಲ, ಆದ್ದರಿಂದ ನನಗೆ ಏನಾಗುತ್ತಿದೆ ಎಂಬುದನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ನಾನು ನಿರ್ಧರಿಸಿದ್ದೇನೆ. ಇದರಿಂದ ಜನರು ಏನು ನಡೆಯುತ್ತಿದೆ ಎಂಬುದನ್ನು ಸಹ ತಿಳಿದುಕೊಳ್ಳುತ್ತಾರೆ ಎಂದು ಹೇಳಿದರು.