ಕರ್ನಾಟಕ

karnataka

ETV Bharat / bharat

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜನವರಿ 5ರವರೆಗೆ ಪೊಲೀಸ್ ಕಸ್ಟಡಿ

Parliament security breach case: ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ದೆಹಲಿ ನ್ಯಾಯಾಲಯವು ಜನವರಿ 5 ರವರೆಗೆ ವಿಸ್ತರಿಸಿದೆ.

Parliament security breach case
ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜನವರಿ 5ರವರೆಗೆ ಪೊಲೀಸ್ ಕಸ್ಟಡಿ

By ETV Bharat Karnataka Team

Published : Dec 22, 2023, 10:06 AM IST

ನವದೆಹಲಿ:ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ದೆಹಲಿ ನ್ಯಾಯಾಲಯವು ಜನವರಿ 5 ರವರೆಗೆ ಗುರುವಾರ ವಿಸ್ತರಿಸಿದೆ. ಆರೋಪಿಗಳಾದ ಸಾಗರ್ ಶರ್ಮಾ, ಮನೋರಂಜನ್ ಡಿ, ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆಯನ್ನು ಪಟಿಯಾಲ ಹೌಸ್ ಕೋರ್ಟ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್‌ಜೆ) ಹರ್ದೀಪ್ ಕೌರ್ ಅವರ ಮುಂದೆ ಹಾಜರುಪಡಿಸಲಾಯಿತು.

ಪೊಲೀಸರು ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಾಲಯವು ಆರೋಪಿಗಳಿಗೆ ಕಸ್ಟಡಿಯನ್ನು ವಿಸ್ತರಿಸಿತು. ನಾಲ್ವರು ಆರೋಪಿಗಳನ್ನು ಡಿಸೆಂಬರ್ 13ರಂದು ಬಂಧಿಸಲಾಗಿತ್ತು. ಆರೋಪಿಗಳಿಗೆ ಈ ಹಿಂದೆ ನೀಡಲಾಗಿದ್ದ ಏಳು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ಬಳಿಕ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಪ್ರಕರಣದ ಆರೋಪಿಗಳು ಗಂಭೀರ ಅಪರಾಧ ಎದುರಿಸುತ್ತಿದ್ದಾರೆ. ಸತತವಾಗಿ ಆರೋಪಿಗಳು ತಮ್ಮ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆರೋಪಿಗಳ ಪರ ವಾದ ಮಂಡಿಸಿದ ವಕೀಲ ಉಮಾಕಾಂತ್ ಕಟಾರಿಯಾ, ಪೊಲೀಸರು ನಾಲ್ಕು ಸುಟ್ಟ ಮೊಬೈಲ್ ಫೋನ್‌ಗಳು ಮತ್ತು ಇತರ ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಆರೋಪಿಯ ಬಂಧನದ ಅವಧಿ ವಿಸ್ತರಿಸುವಂತೆ ಕೋರಿದ ಪೊಲೀಸರು, ಎಲ್ಲಾ ಆರೋಪಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಲು ಬಯಸಿದ್ದಾರೆ. ಈ ಕಾರ್ಯಕ್ಕಾಗಿ ಹೆಚ್ಚುವರಿಯಾಗಿ 15 ದಿನಗಳು ಬೇಕಾಗುತ್ತವೆ. ಪೊಲೀಸರು ಆರೋಪಿಗಳನ್ನು ಹೆಚ್ಚು ತನಿಖೆಗೆ ಒಳಪಡಿಸಲಿದ್ದಾರೆ. ಮುಂದಿನ 15 ದಿನಗಳ ಕಾಲ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ಪೊಲೀಸರು ತಿಳಿಸಿದ್ದೇನು?:ದೆಹಲಿ ಪೊಲೀಸರು ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ಎಫ್‌ಐಆರ್ ದಾಖಲಿಸಿದ್ದಾರೆ. ಭದ್ರತಾ ಲೋಪ ಸಮಸ್ಯೆ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಹೆಸರಿಸಿರುವ ಪ್ರಾಸಿಕ್ಯೂಷನ್, ಭಯವನ್ನು ಹುಟ್ಟುಹಾಕುವ ಉದ್ದೇಶದಿಂದ ಸಂಸತ್ತಿನ ಮೇಲೆ ಯೋಜಿತ ದಾಳಿ ಮಾಡಿದ್ದಾರೆ. ಆರೋಪಿಗಳ ವಿರುದ್ಧದ ಆರೋಪದಲ್ಲಿ ಯುಎಪಿಎಯ ಸೆಕ್ಷನ್ 16 (ಭಯೋತ್ಪಾದನೆ) ಮತ್ತು 18 (ಭಯೋತ್ಪಾದನೆಗೆ ಪಿತೂರಿ) ಸೇರಿಸಿದ್ದೇವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಗ್ಯಾಲರಿಯಿಂದ ಸಂಸದರು ಕುಳಿತುಕೊಳ್ಳುವ ಜಾಗಕ್ಕೆ ಜಿಗಿಯುವ ಮೂಲಕ ವ್ಯಕ್ತಿಗಳು ತಮ್ಮ ಹಕ್ಕುಗಳನ್ನು ಮೀರಿದ್ದಾರೆ. ಆರೋಪಿಗಳು ತಮ್ಮ ಬೂಟುಗಳಲ್ಲಿ ಸ್ಮೋಕ್​ ಕ್ರ್ಯಾಕರ್​ಗಳನ್ನು ಇಟ್ಟಿಕೊಂಡು ಬಂದು, ಲೋಕಸಭೆ ಕಲಾಪದೊಳಗೆ ಸ್ಪ್ರೇ ಮಾಡಿದ್ದರು. ಆರೋಪಿಗಳ ನಿಜವಾದ ಉದ್ದೇಶವನ್ನು ನಿರ್ಧರಿಸಲು ಮತ್ತು ಇತರ ಯಾವುದೇ ವ್ಯಕ್ತಿಗಳನ್ನು ಗುರುತಿಸಲು ಆರೋಪಿಗಳ ಕಸ್ಟಡಿ ವಿಸ್ತರಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು.

ಲಕ್ನೋದಲ್ಲಿ ತಯಾರಾದ ವಿಶೇಷ ಪಾದರಕ್ಷೆಗಳ (ಶೂ) ಬಗ್ಗೆ ತನಿಖೆ ನಡೆಯಬೇಕಿದೆ. ತನಿಖೆಗಾಗಿ ಮುಂಬೈ, ಮೈಸೂರು, ಲಖನೌಗೆ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆರೋಪಿಗಳು ತಮ್ಮ ಸ್ವಂತ ವಕೀಲರನ್ನು ಹೊಂದಿಲ್ಲ ಎಂದು ಹೇಳಿದ ನಂತರ ನ್ಯಾಯಾಲಯವು ಅವರಿಗೆ ಕಾನೂನು ನೆರವು ಸಲಹೆಗಾರರನ್ನು ನೇಮಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಆರೋಪಿಗಳ ವಕೀಲರು, ಪೊಲೀಸರ ಮನವಿಯನ್ನು ವಿರೋಧಿಸಿ, ತನಿಖೆಗೆ ಕೆಲವು ದಿನಗಳು ಮಾತ್ರ ಸಾಕು ಎಂದು ವಾದ ಮಂಡಿಸಿದರು.

2001ರ ಸಂಸತ್ತಿನ ಭಯೋತ್ಪಾದನಾ ದಾಳಿಯ 22ನೇ ವಾರ್ಷಿಕೋತ್ಸವದಂದು, ಸಂಸತ್ತಿನ ಭದ್ರತಾ ಉಲ್ಲಂಘನೆ ಘಟನೆ ನಡೆದಿರುವುದು ಜನರ ಆತಂಕಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ:ಕಣಿವೆ ನಾಡಿನಲ್ಲಿ ಉಗ್ರರ ಅಟ್ಟಹಾಸ, ಹುತಾತ್ಮರ ಸಂಖ್ಯೆ ಐದಕ್ಕೇರಿಕೆ

ABOUT THE AUTHOR

...view details