ಮುಂಬೈ(ಮಹಾರಾಷ್ಟ್ರ):ಪ್ರವಾದಿ ಮುಹಮ್ಮದ್ ಕುರಿತು ಕಾಮೆಂಟ್ ಮಾಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ಅಮರಾವತಿ ಮೂಲದ ಉಮೇಶ್ ಕೊಲ್ಹೆ ಹತ್ಯೆಯಾಗಿತ್ತು. ಪ್ರಕರಣದ ಎಲ್ಲ ಆರೋಪಿಗಳನ್ನು ಸದ್ಯ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಆರೋಪಿ ಶಾರುಖ್ ಪಠಾಣ್‌ಗೆ ಜೈಲಿನ ಇತರ ಕೈದಿಗಳು ಥಳಿಸಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ.
ಆರ್ಥರ್ ರೋಡ್ ಜೈಲಿನಲ್ಲಿ ಶಾರುಖ್ ಪಠಾಣ್ ಮತ್ತು ಇತರ ಕೈದಿಗಳು ಮಾತನಾಡುತ್ತಿದ್ದರು. ಆ ವೇಳೆ ಯಾರನ್ನು ಯಾವ ಕಾರಣಕ್ಕೆ ಬಂಧಿಸಲಾಗಿದೆ ಎಂಬ ಬಗ್ಗೆ ಅವರ ನಡುವೆ ಚರ್ಚೆ ನಡೆದಿದೆ. ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಉಮೇಶ್ ಕೊಲ್ಹೆಯ ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಶಾರುಖ್ ಪಠಾಣ್ ಹೇಳಿದ್ದಾನೆ.
ಆ ವೇಳೆ ಆರೋಪಿಗಳಾದ ಕಲ್ಪೇಶ್ ಪಟೇಲ್, ಹೇಮಂತ್ ಮನೇರಿಯಾ, ಅರವಿಂದ್ ಯಾದವ್, ಶ್ರವಣ್ ಚವ್ಹಾಣ್ ಅಲಿಯಾಸ್ ಅವನ್ ಮತ್ತು ಸಂದೀಪ್ ಜಾಧವ್ ಸೇರಿಕೊಂಡು ಶಾರುಖ್ ಪಠಾಣ್ ಮೇಲೆ ಹಲ್ಲೆ ನಡೆಸಿದ್ದಾರೆ. ನೂಪುರ್ ಶರ್ಮಾ ಹೇಳಿಕೆ ವಿವಾದ ಇದೀಗ ಜೈಲಿನಲ್ಲೂ ಸದ್ದು ಮಾಡುತ್ತಿದೆ.