ಮುಂಬೈ (ಮಹಾರಾಷ್ಟ್ರ) :ಕಳೆದ ತಿಂಗಳು2023ರ ಏಕದಿನ ಪುರುಷರ ವಿಶ್ವಕಪ್ನ ಹೈವೋಲ್ಟೇಜ್ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಪಂದ್ಯಕ್ಕೆ ಟಿಕೆಟ್ ನೀಡುವುದಾಗಿ ಮಹಿಳಾ ಉದ್ಯಮಿಯೊಬ್ಬರಿಗೆ 15 ಲಕ್ಷ ರೂ. ವಂಚಿಸಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನನ್ನು ಸೌರಭ್ ನಿಕಮ್ (37) ಎಂದು ಗುರುತಿಸಲಾಗಿದ್ದು, ಆರೋಪಿ ಜೊತೆಗಿದ್ದ ಆತನ ಸಹಚರ ವೆಂಕಟ್ ಮಂಡಲ ಪರಾರಿಯಾಗಿದ್ದಾನೆ.
ಮುಂಬೈ ಮೂಲದ ದೂರುದಾರೆ ಮಹಿಳೆ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯೊಂದನ್ನು ನಡೆಸುತ್ತಿದ್ದು, ಕಳೆದ ತಿಂಗಳು ನಡೆದ ಭಾರತ-ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಪಂದ್ಯ ವೀಕ್ಷಣೆಗಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನ ಪ್ರೆಸಿಡೆನ್ಸಿ ಕ್ಲಾಸ್‌ನಲ್ಲಿ 18 ಟಿಕೆಟ್‌ಗಳ ವ್ಯವಸ್ಥೆ ಮಾಡಲು ಆರೋಪಿಗಳಿಗೆ 34 ಲಕ್ಷ ರೂ. ಪಾವತಿಸಿದ್ದರು. ಆದರೆ, ಆರೋಪಿಗಳು ಮಹಿಳೆಗೆ ಕೇವಲ 9 ಟಿಕೆಟ್‌ಗಳನ್ನು ನೀಡಿದ್ದರು. ಉಳಿದ ಟಿಕೆಟ್‌ಗಳನ್ನು ಕೇಳಿದಾಗ ಕೊಲೆ ಬೆದರಿಕೆ ಹಾಕಿ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ್ದರು.
ಆರೋಪಿ ಮಂಡಲ ಕ್ರಿಕೆಟ್ ಬುಕ್ಕಿಗಳೊಂದಿಗೆ ಮತ್ತು ಮುಂಬೈ ಮೂಲದ ಹೋಟೆಲ್ ಉದ್ಯಮಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಅಧಿಕ ಬೆಲೆಗೆ ಟಿಕೆಟ್ ಮಾರಾಟಕ್ಕೆ ಯತ್ನ; ಓರ್ವನ ಬಂಧನ : ಇದಕ್ಕೂ ಮುನ್ನ ಮುಂಬೈ ಪೊಲೀಸರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೊದಲ ಸೆಮಿಫೈನಲ್ ಪಂದ್ಯದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಸೆರೆ ಹಿಡಿದಿದ್ದರು. ವಿಐಪಿ ವ್ಯಕ್ತಿಗಳು ಅಥವಾ ವಿಶೇಷ ಆಹ್ವಾನಿತರಿಗೆ ಮೀಸಲಿರುವ ತಲಾ 1.2 ಲಕ್ಷ ರೂಪಾಯಿ ಮೌಲ್ಯದ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ದುಬಾರಿ ಹಣಕ್ಕಾಗಿ ಬ್ಲಾಕ್ ಮಾರ್ಕೆಟಿಂಗ್ ಮಾಡುತ್ತಿದ್ದ ಎಂದು ತಿಳಿದು ಬಂದಿತ್ತು. ಈ ಕುರಿತ ಸುಳಿವು ಆಧರಿಸಿ ತಕ್ಷಣ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಎರಡು ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ :ಭಾರತ vs ನ್ಯೂಜಿಲೆಂಡ್ ಸೆಮೀಸ್ ಫೈಟ್: ನಕಲಿ ಟಿಕೆಟ್ ಬಗ್ಗೆ ಇರಲಿ ಎಚ್ಚರ!