ನವದೆಹಲಿ: ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿದ ಹಿನ್ನಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಬಾರಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಜೋಶಿ ಅವರು, ಪ್ರಧಾನ ಮಂತ್ರಿ ವಿರುದ್ಧ ಆಧಾರ ರಹಿತ ಆರೋಪ ಮಾಡಿದ ಹಿನ್ನೆಲೆ ನಶಿಕಾಂತ್ ದುವೆ ಅವರು ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅವರು ಸಂಸತ್ತಿನಲ್ಲಿ ಏನು ಹೇಳಿದ್ದಾರೋ ಅದಕ್ಕೆ ಸಾಕ್ಷಿ ಒದಗಿಸಬೇಕು. ಆದರೆ, ಇದುವರೆಗೆ ಯಾವುದೇ ಸಾಕ್ಷಿಯನ್ನು ಅವರು ಒದಗಿಸಿಲ್ಲ. ನಾವು ಈ ದೇಶದ ಜನರಿಗೆ ಉತ್ತರಿಸಬೇಕಾಗಿದೆ. ಈ ಹಿನ್ನಲೆ ಈ ಬಾರಿ ನೋಟಿಸ್ ಜಾರಿಯಾಗಿದ್ದು , ಕ್ರಮಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ.
ದುಬೆ ಕಳುಹಿಸಿರುವ ಪತ್ರದಲ್ಲಿ ಏನಿದೆ?:ಫೆಬ್ರವರಿ 8ರಂದು ದುಬೆ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಕಳುಹಿಸಿದ್ದರು. ಈ ಪತ್ರದಲ್ಲಿ ಕಾಂಗ್ರೆಸ್ ಸಂಸದರು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಧಾನಿ ಹಾಗೂ ಸದನಕ್ಕೆ ಅವಹೇಳನಕಾರಿ, ಅಸಭ್ಯ, ಅಸಂಸದೀಯ, ಘನತೆಯಿಲ್ಲದಂತೆ ವರ್ತಿಸುತ್ತಿದ್ದಾರೆ. ಸದನದಲ್ಲಿ ಹೇಳಿಕೆ ನೀಡಿದ ರಾಹುಲ್ ಗಾಂಧಿ ಇದಕ್ಕೆ ಪೂರಕವಾದ ಯಾವುದೇ ಸಾಕ್ಷಿಯನ್ನು ಒದಗಿಸಿಲ್ಲ. ಅವರ ಹೇಳಿಕೆಯನ್ನು ಬೆಂಬಲಸುವ ಯಾವುದೇ ದಾಖಲಾತಿಗಳು ಕೂಡ ಇಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಸಂಸದರು ಸರಿಯಾದ ಪುರಾವೆ ಇಲ್ಲದೇ ಸದನವನ್ನು ತಪ್ಪು ದಾರಿಗೆ ಎಳೆಯುವುದರ ಜೊತೆಗೆ ಅವರು ಪ್ರಧಾನಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಯತ್ನ ನಡೆಸುತ್ತಿದ್ದಾರೆ. ಅವರ ಈ ವರ್ತನೆ ಸದನ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸದನದ ಅವಹೇಳನ ನಡೆಸುತ್ತಿರುವ ಹಿನ್ನಲೆ ರಾಹುಲ್ ಗಾಂಧಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ದುಬೆ ಪತ್ರದಲ್ಲಿ ಮನವಿ ಮಾಡಿದ್ದಾರೆ.