ಡೆಹ್ರಾಡೂನ್ (ಉತ್ತರಾಖಂಡ):ಕಳೆದ ಕೆಲವು ದಿನಗಳ ಹಿಂದೆ ನೇಪಾಳದಲ್ಲಿ ಉಂಟಾದ ಭೂಕಂಪ ಹಾಗೂ ರಾಷ್ಟ್ರ ರಾಜಧಾನಿ ದೆಹಲಿ, ಉತ್ತರಾಖಂಡ ಸೇರಿ ಇತರ ಭಾಗಗಳಲ್ಲಿ ಭೂಮಿ ನಡುಗಿದ ಅನುಭವವಾದ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಳೆಯ ಭೂಕಂಪದ ದಾಖಲೆಗಳ ವಿಶ್ಲೇಷಣೆ ಮಾಡುತ್ತಿದ್ದಾರೆ. ಇದೇ ವೇಳೆ, ಭವಿಷ್ಯದಲ್ಲಿ ಭಾರಿ ಭೂಕಂಪನದ ಅನುಭವವಾಗಬಹುದು ಎಂದೂ ಎಚ್ಚರಿಸಿದ್ದಾರೆ.
ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳ ಮತ್ತು ಉತ್ತರಾಖಂಡದಲ್ಲಿ ಪ್ರತಿದಿನ ಭೂಕಂಪನದ ಅನುಭವವಾಗುತ್ತಿದೆ. ಇದೇ ಕಾರಣಕ್ಕೆ ಈ ಪ್ರದೇಶಗಳ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅಷ್ಟೇ ಅಲ್ಲ, ವಿಜ್ಞಾನಿಗಳೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಭಾಗದಲ್ಲಿ ಭಾರಿ ಭೂಕಂಪ ಸಂಭವಿಸುವ ಭೀತಿ ಬಹಳ ದಿನಗಳಿಂದ ಮನೆ ಮಾಡಿದೆ. ಈ ಭೂಕಂಪ ಯಾವಾಗ ಸಂಭವಿಸುತ್ತದೆ ಅಥವಾ ಅದರ ತೀವ್ರತೆಯ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಇಲ್ಲ.
ವಿಜ್ಞಾನಿಗಳ ಪ್ರಕಾರ, ಈ ಪ್ರದೇಶದ ಭೂಗರ್ಭದಲ್ಲಿ ಸಾಕಷ್ಟು ಒತ್ತಡದ ಶಕ್ತಿ ಸಂಗ್ರಹವಾಗಿದೆ. ಈ ಶಕ್ತಿಯು ಯಾವುದೇ ಸಮಯದಲ್ಲಿ ದೊಡ್ಡ ಭೂಕಂಪದೊಂದಿಗೆ ಭೂಮಿಯನ್ನು ನಡುಗಿಸಬಹುದು ಎಂಬುವುದೇ ಭೀತಿಗೆ ಕಾರಣ. ಜೊತೆಗೆ ಸಣ್ಣ ಭೂಕಂಪಗಳು ಮನುಷ್ಯನಿಗೆ ಎಚ್ಚರವಾಗಿರುವಂತೆ ಸಿಗುವ ಮುನ್ಸೂಚನೆಗಳು. ಒಂದು ಪ್ರದೇಶದಲ್ಲಿ ದೊಡ್ಡ ಭೂಕಂಪ ಸಂಭವಿಸುವ ಸಾಧ್ಯತೆಯಿದ್ದರೆ ಮತ್ತು ಆ ಪ್ರದೇಶದಲ್ಲಿ 5 ಅಥವಾ 6ರ ತೀವ್ರತೆಯ ಭೂಕಂಪ ಸಂಭವಿಸಿದರೆ, ಅದು ಭವಿಷ್ಯದಲ್ಲಿ ಸಂಭವಿಸುವ ದೊಡ್ಡ ಭೂಕಂಪದ ಆತಂಕವನ್ನು ಸ್ವಲ್ಪ ಮುಂದೂಡುತ್ತವೆ. ಈ ಸಣ್ಣ ಭೂಕಂಪಗಳೇ ಭವಿಷ್ಯದಲ್ಲಿ ದೊಡ್ಡ ಸವಾಲುಗಳನ್ನು ಎದುರಿಸಲು ಹೆಚ್ಚಿನ ಸಮಯವನ್ನು ನೀಡುತ್ತವೆ.
ಭೂಗರ್ಭದಲ್ಲಿ ಸಂಗ್ರಹವಾಗಿರುವ ಒತ್ತಡದ ಶಕ್ತಿಯ ಸಣ್ಣ ಪ್ರಮಾಣವನ್ನು ಬಿಡುಗಡೆ ಮಾಡಿದರೆ, ಅದು ದೊಡ್ಡ ಭೂಕಂಪವನ್ನು ಪ್ರಚೋದಿಸುತ್ತದೆ. ಈ ದೊಡ್ಡ ಭೂಕಂಪವು ನೇಪಾಳ ಮತ್ತು ಉತ್ತರಾಖಂಡದ ಪ್ರದೇಶಗಳಲ್ಲಿ ಭಾರಿ ವಿನಾಶವನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲ, ಇಷ್ಟೇ ದೊಡ್ಡ ಪರಿಣಾಮವು ದೆಹಲಿಯಲ್ಲೂ ಕಂಡು ಬರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.