ನವದೆಹಲಿ: ತೆರೆದ ಕೊಳವೆ ಬಾವಿ ಅಥವಾ ಬೋರ್ವೆಲ್ಗಳಲ್ಲಿ ಚಿಕ್ಕ ಮಕ್ಕಳು ಬಿದ್ದು ದುರಂತಗಳು ಸಂಭವಿಸುತ್ತಲೇ ಇವೆ. ಇಂತಹ ದುರಂತಗಳನ್ನು ತಡೆಯಲು ಸುಪ್ರೀಂಕೋರ್ಟ್ ಮಾರ್ಗಸೂಚಿ ರೂಪಿಸಿತ್ತು. ವಿಚಿತ್ರ ಅಂದರೆ, ಈ ಮಾರ್ಗಸೂಚಿ ರೂಪಿಸಿ ಒಂದು ದಶಕವೇ ಕಳೆದು ಹೋಗಿದೆ. ಆದರೆ, ಬೋರ್ವೆಲ್ಗಳ ಅವಘಡಗಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ. ಇಂದಿಗೂ ಪುಟ್ಟ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ.
ದಶಕದ ಹಿಂದೆಯೇ ಬೋರ್‌ವೆಲ್ ದುರಂತಗಳ ಬಗ್ಗೆ ದೇಶದ ಸರ್ವೋಚ್ಛ ನ್ಯಾಯಾಲಯ ಗಮನಹರಿಸಿತ್ತು. ಇವುಗಳನ್ನು ತಡೆಯಲು 2010ರ ಫೆಬ್ರವರಿ 11ರಂದು ಮಾರ್ಗಸೂಚಿ ಪ್ರಕಟಿಸಿತ್ತು. ತೆರೆದ ಕೊಳವೆ ಬಾವಿಯ ಸುತ್ತಲೂ ಮುಳ್ಳುತಂತಿ ಬೇಲಿಗಳನ್ನು ಹಾಕಬೇಕು. ಬೋರ್ ವೆಲ್ಗಳ ಮೇಲೆ ಬೋಲ್ಟ್‌ಗಳಿಂದ ಸ್ಟೀಲ್ ಪ್ಲೇಟ್ ಕವರ್‌ಗಳನ್ನು ಬಳಸಬೇಕು. ಅಲ್ಲದೇ, ಕೆಟ್ಟ ಬೋರ್‌ವೆಲ್‌ಗಳನ್ನು ಸಂಪೂರ್ಣವಾಗಿ ಮುಚ್ಚಬೇಕೆಂಬುವುದು ಸುಪ್ರೀಂ ಮಾರ್ಗಸೂಚಿಯ ಪ್ರಮುಖ ಅಂಶಗಳು.
ಇದನ್ನೂ ಓದಿ:101 ಗಂಟೆಗಳ ಕಾಲ ಯಮನ ವಿರುದ್ಧ ಹೋರಾಡಿ ಗೆದ್ದ ಬಾಲಕ.. ಬೋರ್ವೆಲ್ನಲ್ಲಿ ಬಿದ್ದಿದ್ದ ರಾಹುಲ್ ಜೀವಂತ!
ಅಂದು ಸ್ವಯಂಪ್ರೇರಿತರಾಗಿಯೇ ಅರ್ಜಿ ವಿಚಾರಣೆ ನಡೆಸಿ ಮಾರ್ಗಸೂಚಿ ಪ್ರಕಟಿಸಿದ್ದ ನ್ಯಾಯಾಲಯ, ಬೋರ್ ವೆಲ್ ದುರಂತಗಳನ್ನು ತಡೆಯಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ವಿವಿಧ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಜಮೀನು ಅಥವಾ ಆವರಣದ ಮಾಲೀಕರು ಬೋರ್‌ವೆಲ್ ಅಥವಾ ಕೊಳವೆ ಬಾವಿಗಳನ್ನು ಕೊರಿಸುವ ಕನಿಷ್ಠ 15 ದಿನಗಳ ಮುಂಚಿತವಾಗಿ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಬೇಕೆಂದು ಆದೇಶಿಸಿತ್ತು.
ಇದನ್ನೂ ಓದಿ:ಕೊಳವೆ ಬಾವಿಯಲ್ಲಿ ಬಿದ್ದ ಎರಡು ವರ್ಷದ ಮಗುವಿನ ರಕ್ಷಣೆ.. ಯೋಧರ ಕಾರ್ಯಕ್ಕೆ ಶ್ಲಾಘನೆ
ಇಷ್ಟೇ ಅಲ್ಲ, ನಿರ್ದಿಷ್ಟ ಸ್ಥಳದಲ್ಲಿ ಬೋರ್‌ವೆಲ್‌ಗಳನ್ನು ಕೊರೆಯುವ ಕಾರ್ಯಾಚರಣೆ ಪೂರ್ಣಗೊಂಡ ನಂತರ, ನೆಲದ ಪರಿಸ್ಥಿತಿಯನ್ನು ಪರೀಕ್ಷಿಸಬೇಕು. ಕೊರೆಯುವ ಮೊದಲು ಹೇಗಿತ್ತು ಮತ್ತು ಕೊರೆದ ಬಳಿಕ ಏನಾಗಿದೆ ಎಂದು ಪರಿಶೀಲಿಸಬೇಕು. ಕೊಳವೆ ಬಾವಿಗಳನ್ನು ಮುಚ್ಚದೆ ಹಾಗೆಯೇ ಬಿಡಬಾರದು. ಇಂತಹ ಮಾರ್ಗಸೂಚಿಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಈ ಆದೇಶದ ಪ್ರತಿಯನ್ನು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ರವಾನಿಸಿ, ಅಲ್ಲಿಂದ ಆಯಾ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳಹಿಸಬೇಕೆಂದು ಹೇಳಿತ್ತು. ಇದೆಲ್ಲವನ್ನೂ ದಶಕದ ಹಿಂದೆಯೇ ಸುಪ್ರೀಂಕೋರ್ಟ್ ಹೇಳಿದೆ. ವಿಪರ್ಯಾಸವೆಂದರೆ ಇಂದಿಗೂ ಯಾವುದೇ ರಾಜ್ಯಗಳು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ.