ಚೆಬ್ರೋಲು (ಆಂಧ್ರಪ್ರದೇಶ): ಜೂನ್ 26ರಂದು ಲಂಡನ್‌ನಲ್ಲಿ ಅಪಘಾತಕ್ಕೊಳಗಾಗಿದ್ದ ಆಂಧ್ರಪ್ರದೇಶದ 25 ವರ್ಷದ ಯುವಕ ಕಿರಣ್ ಕುಮಾರ್ ಸಾವನ್ನಪ್ಪಿದ್ದಾರೆ. ಗುಂಟೂರು ಜಿಲ್ಲೆಯ ಚೆಬ್ರೋಲು ಮಂಡಲದ ಗೋದಾವರ್ರು ಗ್ರಾಮದ ನಿವಾಸಿ ಕಿರಣ್ ಕುಮಾರ್ ಏಲೂರಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ತನ್ನ ಉನ್ನತ ಶಿಕ್ಷಣ ಎಂಎಸ್‌ಗಾಗಿ ಇಂಗ್ಲೆಂಡ್ನ ಲಂಡನ್‌ನಲ್ಲಿ ನೆಲೆಸಿದ್ದರು.
ಉನ್ನತ ಶಿಕ್ಷಣದ ಬಳಿಕ ಯುಕೆಯಲ್ಲಿ ಉದ್ಯೋಗ ಪಡೆಯಲು ತಜ್ಞರ ಸಲಹೆ ಮೇರೆಗೆ ಕೆಲವು ಕೋರ್ಸ್ಗಳಿಗಾಗಿ ಟ್ಯೂಷನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಹೀಗೆ ಜೂನ್ 26ರಂದು ಕುಮಾರ್ ದ್ವಿಚಕ್ರ ವಾಹನದಲ್ಲಿ ತರಗತಿಗೆ ಹಾಜರಾಗಲು ಹೋಗುತ್ತಿದ್ದರು. ಇದೇ ಸಮಯದಲ್ಲಿ ಪೊಲೀಸರು ದರೋಡೆಕೋರನನ್ನು ಹಿಂಬಾಲಿಸುತ್ತಿದ್ದರು. ಇದರಿಂದ ಅತಿವೇಗದಲ್ಲಿ ಬಂದ ಆರೋಪಿಯ ವಾಹನ ಕಿರಣ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕಿರಣ್ ಕುಮಾರ್ ಅಸುನೀಗಿದ್ದಾರೆ.
ಮೃತಪಟ್ಟ ಮಗನ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳಲು ಅನಿವಾಸಿ ಭಾರತೀಯರ ನೆರವು ಪಡೆದಿದ್ದು, ಲಂಡನ್ನಿಂದ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸುತ್ತಿದೆ. ಕಿರಣ್ ಕುಮಾರ್ ಪೋಷಕರು ದೇವರೂರು ಗ್ರಾಮದ ಆರಾಧ್ಯುಲ ಯಜ್ಞನಾರಾಯಣ ಮತ್ತು ಭೂಲಕ್ಷ್ಮಿ. ಯುವಕನಿಗೆ ಹಿರಿಯ ಸಹೋದರ ಸುಧೀರ್ ಕುಮಾರ್ ಎಂಬವರಿದ್ದು ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿ ಕೆಲವೇ ದಿನಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದ ಮಗ ಸಾವಿಗೀಡಾಗಿದ್ದು ಪೋಷಕರಲ್ಲಿ ದುಃಖ ಮಡುಗಟ್ಟಿದೆ.