ಬಾಢ್ಮೇರ್(ರಾಜಸ್ಥಾನ): ಎಸ್‌ಯುವಿ ಕಾರು ಮತ್ತು ಟ್ರಕ್ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ 8 ಜನರು ಸಾವನ್ನಪ್ಪಿದರುವ ಘಟನೆ ಜಿಲ್ಲೆಯ ಗುಡಮಲಾನಿ ಮೆಗಾ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶೋಕಕ್ಕೆ ತಿರುಗಿದ ಸಂತಸ: ಮಾಹಿತಿ ಪ್ರಕಾರ ಜಲೋರ್ ಜಿಲ್ಲೆಯ ಸಂಚೋರ್‌ನಲ್ಲಿ ನೆಲೆಸಿರುವ ಒಂದೇ ಕುಟುಂಬದವರು ನಿನ್ನೆ ರಾತ್ರಿ ಎಸ್‌ಯುವಿ ಕಾರಿನಲ್ಲಿ ಗುಡಮಲಾನಿಯಲ್ಲಿ ನಡೆಯುತ್ತಿದ್ದ ಮದುವೆಗೆ ತೆರಳಿದ್ದರು. ಈ ವೇಳೆ ಮಾರ್ಗಮಧ್ಯೆ ಎಸ್‌ಯುವಿ ಕಾರು ಟ್ರಕ್ಗೆ ಡಿಕ್ಕಿ ಹೊಡೆದಿದೆ. ಇದರಲ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡ 4 ಮಂದಿಯನ್ನು ಗುಡಮಲಾನಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಸಂಚೋರ್‌ಗೆ ರವಾನಿಸಲಾಗಿದೆ.