ಹೈದರಾಬಾದ್ (ತೆಲಂಗಾಣ): ಕಲ್ಲಿದ್ದಲು ಗಣಿಯಲ್ಲಿ ಛಾವಣಿ ಕುಸಿದ ನಾಲ್ವರು ಸಿಬ್ಬಂದಿ ಕಳೆದ 18 ಗಂಟೆಗಳಿಂದ ಅವಶೇಷಗಳಡಿ ಸಿಲುಕಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ರಾಮಗುಂಡಂನಲ್ಲಿ ಜರುಗಿದೆ. ರಾಮಗುಂಡಂ ಸಮೀಪದ ಆರ್ಜಿ-3 ವ್ಯಾಪ್ತಿಯ ಅಡ್ರಿಯಾಲಾ ಲಾಂಗ್‌ವಾಲ್ ಕಲ್ಲಿದ್ದಲು ಗಣಿಯಲ್ಲಿ ಈ ದುರಂತ ಸಂಭವಿಸಿದೆ. ಪರಿಣಾಮ ಮೂವರು ಗಾಯಗೊಂಡಿದ್ದು, ಇನ್ನೂ ನಾಲ್ವರು ಅವಶೇಷಗಳಡಿ ಸಿಲುಕಿದ್ದಾರೆ.
ಗಣಿಯ ಎಎಲ್‌ಪಿಯ 85ನೇ ಹಂತದಲ್ಲಿ ಛಾವಣಿಗೆ ಚಿಲಕ ಹಾಕುವ ವೇಳೆ, ಮೇಲ್ಛಾವಣಿಯ ಪಕ್ಕದ ಗೋಡೆ ಕುಸಿದು ಬಿದ್ದು ಈ ದುರ್ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿದ್ದು, ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವಶೇಷಗಳಡಿ ಸಿಲುಕಿರುವ ನಾಲ್ವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆದಿದ್ದು, ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.