ಕತಿಹಾರ್(ಬಿಹಾರ): ಆಟೋಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಎಂಟು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕತಿಹಾರ ಜಿಲ್ಲಾ ಕೇಂದ್ರದಿಂದ ಎಂಟು ಕಿಮೀ ದೂರದಲ್ಲಿರುವ ಕೋಧಾ ಪೊಲೀಸ್ ಠಾಣೆ ವ್ಯಾಪ್ತಿಯ ದಿಗ್ರಿ ಪೆಟ್ರೋಲ್ ಪಂಪ್ ಬಳಿಯ ರಾಷ್ಟ್ರೀಯ ಹೆದ್ದಾರಿ 81ರಲ್ಲಿ ನಡೆದಿದೆ.
ಮೃತರೆಲ್ಲರೂ ಒಂದೇ ಕುಟುಂಬದವರು: ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಆಟೋದಲ್ಲಿ ಖೇರಿಯಾದಿಂದ ಕತಿಹಾರ್‌ಗೆ ಹೋಗುತ್ತಿದ್ದರು. ಅಷ್ಟರಲ್ಲಿ ನಿಯಂತ್ರಣ ತಪ್ಪಿದ ಲಾರಿಯೊಂದು ಆಟೋಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಆದ ಶಬ್ದ ಕೇಳಿ ಸ್ಥಳಕ್ಕೆ ಜನರು ಆಗಮಿಸುವ ವೇಳೆ ಆಟೋದಲ್ಲಿದ್ದವರು ಸಾವನ್ನಪ್ಪಿದ್ದರು. ಇವರು ಖೇರಿಯಾದಿಂದ ಕತಿಹಾರ್ ರೈಲು ಜಂಕ್ಷನ್‌ಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಆಟೋದಲ್ಲಿ ಒಟ್ಟು ಎಂಟು ಮಂದಿ ಇದ್ದರು. ರಾತ್ರಿ 8.20ರ ಸುಮಾರಿಗೆ ಘಟನೆ ನಡೆದಿದೆ.
ಮೃತರನ್ನು ಧನಂಜಯ್ ಠಾಕೂರ್, ಅರುಣ್ ಠಾಕೂರ್, ಊರ್ಮಿಳಾ ದೇವಿ, ಮುಖರ್ಜಿ, ಲಾಲು, ಗೋಲು ಮತ್ತು ಆಟೋ ಚಾಲಕ ಪಪ್ಪು ಪಾಸ್ವಾನ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಜಿತೇಂದ್ರ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಈ ಘಟನೆಯ ನಂತರ ಟ್ರಕ್ ಚಾಲಕ ಪರಾರಿಯಾಗಿದ್ದಾನೆ.
ಮೃತರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ:ಖೇರಿಯಾದ ಎಲ್ಲಾ ನಿವಾಸಿಗಳು ನೀರಜ್ ಠಾಕೂರ್ ಕುಟುಂಬದ ಸದಸ್ಯರು. ಮೃತರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಮಾಹಿತಿಯ ನಂತರ ಕೋಡಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಕೋಧಾ ಪೊಲೀಸ್ ಠಾಣೆ ಅಧ್ಯಕ್ಷ ರೂಪಕ್ ರಂಜನ್ ಸಿಂಗ್ ತಿಳಿಸಿದ್ದಾರೆ. ಮೃತರ ಸಂಬಂಧಿಕರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.