ವಿಜಯವಾಡ: ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಗೃಹ ಬಂಧನ ಅರ್ಜಿಯನ್ನು ವಿಜಯವಾಡ ಎಸಿಬಿ ಕೋರ್ಟ್ ವಜಾಗೊಳಿಸಿದೆ. ಚಂದ್ರಬಾಬು ಅವರ ಪರ ವಕೀಲರು ಸಲ್ಲಿಸಿದ್ದ ಅರ್ಜಿ ಕುರಿತು ಎರಡು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.
ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ 14 ದಿನಗಳ ಬಂಧನದಲ್ಲಿರುವ ಚಂದ್ರಬಾಬು ನಾಯ್ಡು ಅವರನ್ನು ಗೃಹಬಂಧನದಲ್ಲಿರಿಸಲು ಅನುಮತಿ ಕೋರಿ ಮಾಜಿ ಸಿಎಂ ಪರ ವಕೀಲು ಸಲ್ಲಿಸಿದ್ದ ಅರ್ಜಿಯನ್ನು ಎಸಿಬಿ ವಿಶೇಷ ನ್ಯಾಯಾಲಯ ತಿರಸ್ಕರಿಸಿ ತೀರ್ಪು ನೀಡಿದೆ. ಚಂದ್ರಬಾಬು ನಾಯ್ಡು ಪರ ವಕೀಲ ಸಿದ್ಧಾರ್ಥ್ ಲೂತ್ರಾ ಭಾನುವಾರ ರಾತ್ರಿ ಭದ್ರತೆ ದೃಷ್ಟಿಯಿಂದ ಗೃಹಬಂಧನಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಸೋಮವಾರ ಬೆಳಗ್ಗೆಯಿಂದಲೇ ಪ್ರಾರಂಭಗೊಂಡ ಅರ್ಜಿಯ ಸುದೀರ್ಘ ವಿಚಾರಣೆ ಮಂಗಳವಾರವೂ ಮುಂದುವರಿತ್ತು. ಎರಡೂ ಕಡೆಯ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಚಂದ್ರಬಾಬು ಅವರ ಅರ್ಜಿಯನ್ನು ತಿರಸ್ಕರಿಸಿ, ಚಂದ್ರ ಬಾಬು ಅವರ ಆರೊಗ್ಯ ಉತ್ತಮವಾಗಿದ್ದು, ಜೈಲಿನಲ್ಲಿ ಸಂಪೂರ್ಣ ಭದ್ರತೆ ಒದಗಿಸಲಾಗಿದೆ ಎನ್ನುವ ಮಾತನ್ನು ಹೇಳಿದೆ.
ಎಸಿಬಿ ನ್ಯಾಯಾಲಯದಲ್ಲಿ ಸೋಮವಾರ ಎರಡೂ ಕಡೆಯ ವಕೀಲರು ಸುದೀರ್ಘವಾದ ವಾದ ಮಂಡಿಸಿದ್ದಾರೆ. ಮುದಾಟ ಜೈಲಿನಲ್ಲಿರುವ ಚಂದ್ರಬಾಬು ನಾಯ್ಡು ಅವರ ಭದ್ರತೆ ಬಗ್ಗೆ ಅನುಮಾನವಿದೆ ಎಂದು ಬಾಬು ಪರ ವಕೀಲ ಸಿದ್ಧಾರ್ಥ ಲೂತ್ರಾ ಅವರು ವಾದ ಮಂಡಿಸಿದರು. ಸಿಐಡಿ ಪರವಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪೊನ್ನವೋಲು ಸುಧಾಕರ್ ರೆಡ್ಡಿ ವಾದ ಮಂಡಿಸಿದರು. ರಾಜಮಂಡ್ರಿ ಕೇಂದ್ರ ಕಾರಾಗೃಹ ಮನೆಗಿಂತ ಸುರಕ್ಷಿತ ಸ್ಥಳವಾಗಿದೆ. ಹಾಗೂ ಕಾರಾಗೃಹದ ಸಂಪೂರ್ಣ ಸ್ನೇಹಾ ಬ್ಲಾಕ್ ಅನ್ನು ಚಂದ್ರಬಾಬು ನಾಯ್ಡು ಅವರಿಗೆ ನೀಡಲಾಗಿದೆ. ಅಲ್ಲದೆ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ ಎಂದು ವಾದ ಮಂಡಿಸಿದರು.
ಸಂದ್ರಬಾಬು ಅವರಿಗೆ ಜೈಲಿನಲ್ಲಿ ಸಂಪೂರ್ಣ ಭದ್ರತೆ ಇದ್ದು, ಅವರು ಹೊರಗೆ ಇದ್ದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅವಕಾಶವಿದೆ ಎಂದು ಎಎಜಿ ಸುಧಾಕರ್ ರೆಡ್ಡಿ ಹೇಳಿದರು. ಕೌಶಲಾಭಿವೃದ್ಧಿ ಪ್ರಕರಣದಲ್ಲಿ ಬಂಧಿತರಾಗಿರುವ ಜೈಲಿನಲ್ಲಿರುವ ಚಂದ್ರಬಾಬು ನಾಯ್ಡು ಅವರಿಗೆ ಬೆದರಿಕೆ ಇದೆ ಎನ್ನುವ ಆರೋಪವನ್ನು ವಿಜಯವಾಡ ಎಸಿಬಿ ಕೋರ್ಟ್ ತಿರಸ್ಕರಿಸಿದೆ. ವಿಚಾರಣೆಯ ಎರಡನೇ ದಿನವಾದ ಇಂದು ಗೃಹಬಂಧನಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಇದನ್ನೂ ಓದಿ :ಸುದೀರ್ಘ ವಿಚಾರಣೆಯ ಬಳಿಕ ಚಂದ್ರಬಾಬು ನಾಯ್ಡುರನ್ನು ACB ಕೋರ್ಟ್‌ಗೆ ಹಾಜರುಪಡಿಸಿದ ಆಂಧ್ರ ಪೊಲೀಸರು