ಹೈದರಾಬಾದ್: ಪ್ರಖ್ಯಾತ ವಿಮಾನಯಾನ ಸಂಸ್ಥೆ ಯೊಂದರಲ್ಲಿ ಪ್ರಯಾಣಿಕರೊಬ್ಬರಿಗೆ ಕಹಿ ಅನುಭವವಾಗಿದೆ. ವಿಮಾನದಲ್ಲಿನ ಎಸಿ ಅನ್ನು ಆನ್ ಮಾಡುವ ಮುನ್ನವೇ ಪ್ಲೇನ್ ಹಾರಾಟ ನಡೆಸಿದ ಘಟನೆ ವರದಿಯಾಗಿದೆ. ಹೀಗಾಗಿ ಪ್ರಯಾಣಿಕರು ಕೆಲಕಾಲ ಗೊಂದಲಕ್ಕೊಳಗಾದರಲ್ಲದೇ, ತೊಂದರೆ ಅನುಭವಿಸಿದರು ಎಂದು ತಿಳಿದು ಬಂದಿದೆ.
ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಹೀಗಾಗಿದೆ ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈಗ ಆ ವಿಡಿಯೋ ವೈರಲ್ ಆಗಿದೆ. ಚಂಡೀಗಢದಿಂದ ಜೈಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.
ವಿಮಾನ ಹಾರಾಟಕ್ಕೂ ಮುನ್ನ " ಸುಡು ಬಿಸಿಲಿನಲ್ಲಿ ಸುಮಾರು 10-15 ನಿಮಿಷಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಲಾಗಿತ್ತು. ನಂತರ ಎಸಿ ಆನ್ ಮಾಡದೇ ಫ್ಲೈಟ್ ಟೇಕಾಫ್ ಆಯಿತು. ಟೇಕ್ ಆಫ್ ನಿಂದ ಲ್ಯಾಂಡಿಂಗ್ ತನಕ ಎಸಿ ಆನ್ ಆಗಿರಲಿಲ್ಲ. ಇದರಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಆದರೆ, ಪ್ಲೇನ್ನಲ್ಲಿ ಯಾರೂ ಈ ಬಗ್ಗೆ ವಿಮಾನದಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಲಿಲ್ಲ. ಕೆಲವರು ಸೆಕೆಯಿಂದ ತೀವ್ರ ತೊಂದರೆ ಅನುಭವಿಸುವಂತಾಯಿತು. ವಿಮಾನದೊಳಗೆ ಎಸಿ ಆನ್ ಆಗದೇ ಇರುವುದರಿಂದ ಪ್ರಯಾಣಿಕರು ಅಲ್ಲಿನ ಸೆಕೆಯಿಂದ ಪಾರಾಗಲು ಇದ್ದ ಬದ್ಧ ವಸ್ತುಗಳನ್ನು ಕೈಗೆತ್ತಿಕೊಂಡು ಗಾಳಿ ಹೊಡೆದುಕೊಳ್ಳಲು ಆರಂಭಿಸಿದರು. ಗಗನಸಖಿಯರು ಪ್ರಯಾಣಿಕರಿಗೆ ಬೆವರು ಒರೆಸಲು ಸಾಕಷ್ಟು ಟಿಶ್ಯೂ ಪೇಪರ್‌ಗಳನ್ನು ಒದಗಿಸಬೇಕಾಯಿತು‘‘ ಎಂದು ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ. 90 ನಿಮಿಷಗಳ ಕಾಲ ಹವಾನಿಯಂತ್ರಣವಿಲ್ಲದೇ ವಿಮಾನದೊಳಗೆ ಕುಳಿತುಕೊಳ್ಳುವಂತೆ ಮಾಡಲಾಯಿತು ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಮಾನದೊಳಿಗಿನ ಇಂತಹ ವ್ಯವಸ್ಥೆ ಬಗೆಗಿನ ಈ ವಿಡಿಯೋವನ್ನು DGCA ಮತ್ತು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಗೆ ಟ್ಯಾಗ್ ಮಾಡಿದ ಅಮರಿಂದರ್ , ಏರ್‌ಲೈನ್ಸ್ ಮತ್ತು ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ. ಇದೇ ವೇಳೆ ಒಂದೇ ದಿನದಲ್ಲಿ ಮೂರು ಸಂಸ್ಥೆಯ ಮೂರು ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು ಎಂಬ ವರದಿಯಾಗಿದೆ.
ದೆಹಲಿಯಿಂದ ಪಾಟ್ನಾಗೆ ಹೊರಟಿದ್ದ ವಿಮಾನವು ತಾಂತ್ರಿಕ ದೋಷದಿಂದ ಟೇಕ್ ಆಫ್ ಆದ ಮೂರು ನಿಮಿಷಗಳಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. ಈ ಘಟನೆಯ ನಂತರ, ದೆಹಲಿಯಿಂದ ರಾಂಚಿಗೆ ಮತ್ತೊಂದು ವಿಮಾನವು ಟೇಕಾಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ಸಮಸ್ಯೆ ಎದುರಿಸಿತ್ತು.
ಇದನ್ನು ಓದಿ:ಏರ್ ಇಂಡಿಯಾ ವಿಮಾನಗಳ ಕಾರ್ಯಾಚರಣೆ ಮುಖ್ಯಸ್ಥರಾಗಿ ಮನೀಷ್ ಉಪ್ಪಲ್ ನೇಮಕ