ನವದೆಹಲಿ :ಡಿಸೆಂಬರ್ 11 ರಂದು ಭಾರತದ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯ 370 ಮತ್ತು 35(ಎ) ವಿಧಿಗಳನ್ನು ರದ್ದುಗೊಳಿಸುವುದರ ಕುರಿತು ಐತಿಹಾಸಿಕ ತೀರ್ಪು ನೀಡಿತು. ತನ್ನ ತೀರ್ಪಿನ ಮೂಲಕ ನ್ಯಾಯಾಲಯವು ಪ್ರತಿಯೊಬ್ಬ ಭಾರತೀಯನು ಗೌರವಿಸುವ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ ಎತ್ತಿಹಿಡಿದಿದೆ. 2019ರ ಆಗಸ್ಟ್ 5 ರಂದು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವು ಸಾಂವಿಧಾನಿಕ ಏಕೀಕರಣದ ಉದ್ದೇಶದಿಂದ ಮಾಡಲಾಗಿದೆಯೇ ಹೊರತು ದುರುದ್ದೇಶದಿಂದ ಅಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. 370ನೇ ವಿಧಿ ಶಾಶ್ವತವಲ್ಲ ಎಂಬ ಅಂಶವನ್ನು ನ್ಯಾಯಾಲಯ ಇಲ್ಲಿ ಗುರುತಿಸಿದೆ.
ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಉಸಿರುಕಟ್ಟುವ ದೃಶ್ಯಗಳು, ಪ್ರಶಾಂತ ಕಣಿವೆಗಳು ಮತ್ತು ಭವ್ಯವಾದ ಪರ್ವತಗಳು ತಲೆಮಾರುಗಳಿಂದ ಕವಿಗಳು, ಕಲಾವಿದರು ಮತ್ತು ಸಾಹಸಿಗಳಲ್ಲಿ ಮನಸಲ್ಲಿ ಸೂರೆಗೊಂಡಿವೆ. ಅಲ್ಲಿ ಹಿಮಾಲಯವು ಆಕಾಶವನ್ನು ಮುಟ್ಟುತ್ತದೆ. ಸರೋವರಗಳು ಮತ್ತು ನದಿಗಳು ಸ್ವರ್ಗವನ್ನು ಪ್ರತಿಬಿಂಬಿಸುತ್ತದೆ. ಆದರೆ, ಕಳೆದ ಏಳು ದಶಕಗಳಿಂದ ಇದು ಹಿಂಸಾಚಾರ ಮತ್ತು ಅಸ್ಥಿರತೆಗೆ ಸಾಕ್ಷಿಯಾಗಿದೆ.
ದುರದೃಷ್ಟವಶಾತ್, ಶತಮಾನಗಳ ವಸಾಹತುಶಾಹಿ, ಆರ್ಥಿಕ ಮತ್ತು ಮಾನಸಿಕ ಅಧೀನತೆಯಿಂದಾಗಿ ಒಂದು ರೀತಿಯ ಗೊಂದಲಮಯ ಸಮಾಜ ನಿರ್ಮಾಣವಾಯಿತು. ಮೂಲ ವಿಷಯಗಳಲ್ಲಿ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳುವ ಬದಲು, ದ್ವಂದ್ವ ನಿಲುವುಗಳನ್ನು ಹೊಂದಿದೆವು. ಇದು ಗೊಂದಲಕ್ಕೆ ಕಾರಣವಾಯಿತು. ದುಃಖದ ಸಂಗತಿ ಎಂದರೆ ಇಂತಹ ಗೊಂದಲದ ಮನಸ್ಥಿತಿಗೆ ಜಮ್ಮು ಮತ್ತು ಕಾಶ್ಮೀರ ಬಲಿಪಶುವಾಯಿತು. ಸ್ವಾತಂತ್ರ್ಯದ ಸಮಯದಲ್ಲಿ, ನಾವು ರಾಷ್ಟ್ರೀಯ ಏಕೀಕರಣಕ್ಕೆ ಹೊಸ ಆರಂಭವನ್ನು ಮಾಡುವ ಆಯ್ಕೆಯನ್ನು ಹೊಂದಿದ್ದೆವು. ಆದರೆ, ದೀರ್ಘಾವಧಿಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ಗೊಂದಲಮಯ ಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆವು.
ಜಮ್ಮು ಕಾಶ್ಮೀರದ ಜನರು ಅಭಿವೃದ್ಧಿಯನ್ನು ಬಯಸುತ್ತಾರೆ ಎಂದು ನನಗೆ ಸ್ಪಷ್ಟವಾಗಿ ಗೊತ್ತಿತ್ತು. ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳಿಂದ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಜೊತೆಗೆ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಲು ಅವರು ಬಯಸುತ್ತಾರೆ. ಕಳೆದ ಏಳು ದಶಕಗಳಿಂದ ಇಲ್ಲಿನ ಜನರು ಪಡುತ್ತಿರುವ ಕಷ್ಟದಿಂದ ನೆಮ್ಮದಿ ಬಯಸಿದ್ದಾರೆ. ಈ ಮೂಲಕ ತಮ್ಮ ಮುಂದಿನ ಪೀಳಿಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಜನರು ಉತ್ಸುಕರಾಗಿದ್ದಾರೆ.