ಹೈದರಾಬಾದ್:ಇಂದು ಕೇರಳ ಸೇರಿದಂತೆ ಕರಾವಳಿ ಭಾಗಗಳಲ್ಲಿ ವಿಷು ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ವಿಷು ಕೇರಳದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ವಸಂತಕಾಲದ ಆಗಮನವನ್ನು ಇದು ಸೂಚಿಸುತ್ತದೆ. ಅಲ್ಲದೇ ಈ ದಿನವನ್ನು ಕೇರಳಿಗರು ಹೊಸವರ್ಷ ಎಂದು ಹಾಗು ಸುಗ್ಗಿಯ ಹಬ್ಬವೆಂದು ಸಹ ಆಚರಣೆ ಮಾಡುತ್ತಾರೆ. ಸಂಸ್ಕೃತ ಭಾಷೆಯಲ್ಲಿ 'ವಿಷು' ಎಂದರೆ 'ಸಮಾನ' ಎಂದರ್ಥ. ಇದನ್ನು ಕೇವಲ ಕೇರಳಿಗರು ಮಾತ್ರವಲ್ಲದೇ ದೇಶಾದ್ಯಂತ ವಿವಿಧ ಹೆಸರುಗಳಲ್ಲಿ ಈ ದಿನ ಆಚರಿಸಲಾಗುತ್ತದೆ. ಅಸ್ಸೋಂನಲ್ಲಿ 'ಬಿಹು' ಎಂದು ಆಚರಿಸಿದರೇ ಪಂಜಾಬ್, ಉತ್ತರಾಖಂಡದಲ್ಲಿ 'ಬೈಸಾಖಿ' ಎಂದು ಆಚರಿಸುತ್ತಾರೆ.
ವಿಷು ಆರಂಭವಾಗಿದ್ದು ಯಾವಾಗ: ಈ ದಿನ ಸೂರ್ಯ ಆಸ್ಥಾನವನ್ನು ಬದಲಿಸಿ ಮೇಷ ರಾಶಿಗೆ ಪ್ರವೇಶಿಸುತ್ತಾನೆ ಎಂದು ವಿಷು ಆಚರಣೆ ಮಾಡಲಾಗುತ್ತದೆ. ಕ್ರಿ.ಪೂ 844 ರಿಂದ ವಿಷು ಹಬ್ಬದ ಆಚರಣೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಈ ಬಾರಿ ಸೂರ್ಯ ಏ.14 ಶುಕ್ರವಾರದಂದು ಮಧ್ಯಾಹ್ನ ಪ್ರವೇಶ ಮಾಡಿದ್ದು ಈ ಹಿನ್ನೆಲೆ ಇಂದು ಕೇರಳ ಸೇರಿದಂತೆ ಕರ್ನಾಟಕದ ಕರಾವಳಿ ಭಾಗಗಳಲ್ಲಿ ವಿಶು ಆಚರಣೆ ಮಾಡಲಾಗುತ್ತಿದೆ. ಇನ್ನು ಇದು ಕೇರಳ ಜೋತಿಷ್ಯಶಾಸ್ತ್ರದ ಪ್ರಕಾರ ಇದು ಹೊಸ ವರ್ಷವನ್ನು ಗುರುತಿಸುವ ಹಬ್ಬವಾಗಿದೆ. ಸೂರ್ಯ ಮೇಷ ರಾಶಿಗೆ ಆಸ್ಥಾನವನ್ನು ಬದಲಿಸುವುದನ್ನು ಸೂಚಿಸುತ್ತದೆ.
ಅಲ್ಲದೇ ಈ ದಿನ ಸೂರ್ಯ ಪ್ರಕಾಶಮಾನವಾಗಿರುತ್ತಾನೆ ಮತ್ತು ಹೆಚ್ಚು ಶಕ್ತಿಶಾಲಿಯಾಗಿರುತ್ತಾನೆ ಎಂಬುದು ಇಲ್ಲಿಯ ನಂಬಿಕೆಯಾಗಿದೆ. ಈ ಹಿನ್ನೆಲೆ ವಿಶೇಷ ವಿಶು ಹಬ್ಬದಂದು ಬೆಳಗ್ಗೆ ಬೇಗ ಎದ್ದು ಮನೆಯನ್ನು ಶುಭ್ರಗೊಳಿಸಿ, ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಿ, ಮನೆಯನ್ನು ಹೂ ಗಳಿಂದ ಅಲಂಕರಿಸಲಾಗುತ್ತದೆ. ಅಲ್ಲದೇ ಹೊಸ ಬಟ್ಟೆಗಳನ್ನು ಧರಿಸಿ ಕೃಷ್ಣನ ದೇವಸ್ಥಾನಕ್ಕೆ ತೆರಳಿ ಜನರು ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.