ನಾಂದೇಡ್ (ಮಹಾರಾಷ್ಟ್ರ): ದೇಶದ ಸದ್ಯ ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ನೋಡಿ ತಮ್ಮ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷವನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಬದಲಾಯಿಸಲಾಗಿದೆ. ದೇಶದಲ್ಲಿ ಬದಲಾವಣೆ ತರಲೆಂದೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಆರ್‌ಎಸ್ ವರಿಷ್ಠ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ದೇಶದಾದ್ಯಂತ ಬಿಆರ್‌ಎಸ್ ಪಕ್ಷವನ್ನು ವಿಸ್ತರಿಸುವ ಉದ್ದೇಶದಿಂದ ಇಂದು ಮಹಾರಾಷ್ಟ್ರದ ನಾಂದೇಡ್ನಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಕೆಸಿಆರ್ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಹಲವು ನಾಯಕರಿಗೆ ಪಕ್ಷದ ಶಾಲುಗಳನ್ನು ಬಿಆರ್‌ಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಸಿಆರ್, ಮಹಾರಾಷ್ಟ್ರವು ಛತ್ರಪತಿ ಶಿವಾಜಿ, ಅಂಬೇಡ್ಕರ್, ಫುಲೆಯಂತಹ ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡಿದ ಪುಣ್ಯಭೂಮಿ, ಈ ನೆಲದಲ್ಲಿ ಸಮಾವೇಶ ನಡೆಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಅಬ್ ಕಿ ಬಾರ್... ಕಿಸಾನ್ ಸರ್ಕಾರ್ - ಕೆಸಿಆರ್: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದುಹೋಗಿದೆ. ಈ ಅವಧಿಯಲ್ಲಿ ಅನೇಕ ಸರ್ಕಾರಗಳು ಬದಲಾಗಿವೆ. ಹಲವು ನಾಯಕರು ಹಲವು ಮಾತುಗಳನ್ನು ಹೇಳಿದ್ದಾರೆ. ಆದರೆ, ಆ ಮಟ್ಟಿಗೆ ಯಾವುದೇ ಬದಲಾವಣೆ ಆಗಿಲ್ಲ. 75 ವರ್ಷ ಕಳೆದರೂ ಕೂಡ ಜನರಿಗೆ ಕನಿಷ್ಠ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಮಾಡಲಾಗದ ಪರಿಸ್ಥಿತಿ ಇದೆ. ಇದೇ ಮಹಾರಾಷ್ಟ್ರದಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಕಷ್ಟಪಟ್ಟು ಬೆಳೆದರೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಇದೆ. ಆದ್ದರಿಂದಲೇ ನಮ್ಮ ಬಿಆರ್‌ಎಸ್ ಪಕ್ಷವು 'ಅಬ್ ಕಿ ಬಾರ್... ಕಿಸಾನ್ ಸರ್ಕಾರ್' ಎಂಬ ಘೋಷಣೆಯನ್ನು ಮುಂದಿಟ್ಟಿದೆ ಎಂದು ಕೆಸಿಆರ್ ತಿಳಿಸಿದರು.
ರಾಜಕೀಯ ಹೋರಾಟವಲ್ಲ.. ಜೀವನ್ಮರಣದ ಹೋರಾಟ: ನಾವು (ರೈತರು) ಹಲವು ವರ್ಷಗಳಿಂದ ಕಾಯುತ್ತಿದ್ದೇವೆ. ಈಗ ನೇಗಿಲು ಹಿಡಿಯುವ ಕೈಗಳಿಗೆ ಅಧಿಕಾರಿ ಸಿಗುವ ಸಮಯ ಬಂದಿದೆ. ಚುನಾವಣೆಯಲ್ಲಿ ಗೆಲ್ಲಬೇಕಾದ್ದು ನಾಯಕರಲ್ಲ, ಜನ ಸಾಮಾನ್ಯರು ಮತ್ತು ರೈತರು ಗೆಲ್ಲಬೇಕಿದೆ ಎಂದು ಕೆಸಿಆರ್, ಭಾರತವು ಬಡ ದೇಶವಲ್ಲ. ಅಮೆರಿಕಕ್ಕಿಂತ ಭಾರತ ಶ್ರೀಮಂತ ರಾಷ್ಟ್ರ. ಭಾರತದ ಸಂಪನ್ಮೂಲಗಳು ಹೇರಳವಾಗಿದ್ದರೂ, ಜನರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.