ಪಾಲನ್ಪುರ(ಗುಜರಾತ್): ಕರ್ನಾಟಕ ಮೂಲದ ವಿಶೇಷ ಚೇತನ ಮಹಿಳೆಯೊಬ್ಬರನ್ನು ಗುಜರಾತ್ ಸರ್ಕಾರದ '181 ಅಭಯಂ' ತಂಡ ಆಕೆಯ ಪತಿಯ ಬಳಿಗೆ ಸೇರಿಸಿರುವ ಘಟನೆ ಬನಸ್ಕಾಂತ ಜಿಲ್ಲೆಯಲ್ಲಿ ನಡೆದಿದೆ. ಪಾಲನ್ಪುರ ರೈಲ್ವೆ ನಿಲ್ದಾಣದಲ್ಲಿ ವಿಶೇಷ ಚೇತನ ಮಹಿಳೆ ಪಾಲನ್ಪುರ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಈ ಕುರಿತು ದೂರವಾಣಿ ಕರೆ ಸ್ವೀಕರಿಸಿದ '181 ಅಭಯಂ' ಸ್ಥಳಕ್ಕೆ ಧಾವಿಸಿದೆ. ನಂತರ ಯುವತಿಯ ಜೊತೆ ಅಭಯಂ ತಂಡದ ಸದಸ್ಯರು ಮಾತುಕತೆ ನಡೆಸಲು ಮುಂದಾಗಿದ್ದು, ಈ ವೇಳೆಗೆ ಆಕೆಗೆ ಮಾತು ಬರುವುದಿಲ್ಲ ಮತ್ತು ಕಿವಿ ಕೇಳಿಸುವುದಿಲ್ಲ ಎಂದು ಗೊತ್ತಾಗಿದೆ.
ಅಭಯಂ ಕೌನ್ಸಿಲರ್ ಜಿನಾಲ್ಬೆನ್ ಪರ್ಮಾರ್ ಮತ್ತು ಮಹಿಳಾ ಪೊಲೀಸರು ಆಕೆಯನ್ನು ಅಭಯಂ ಪ್ರಧಾನ ಕಚೇರಿಗೆ ಕರೆದೊಯ್ದಿದ್ದಾರೆ. ನಂತರ ಮತ್ತಷ್ಟು ವಿವರ ಕೇಳಿದಾಗ ಯುವತಿ ಕನ್ನಡದಲ್ಲಿ ವಿಳಾಸದ ಜೊತೆಗೆ ಕೆಲವೊಂದು ಮಾಹಿತಿಯನ್ನು ಬರೆದಿದ್ದಾಳೆ. ಆಕೆ ಮೈಸೂರಿನವರಾಗಿದ್ದು, ಇದರ ಜೊತೆಗೆ ತಾನು ಫೇಸ್ಬುಕ್ ಮೂಲಕ ಪರಿಚಯವಾದ ಓರ್ವ ಯುವಕನನ್ನು ವಿವಾಹವಾಗಿರುವುದಾಗಿ ತಿಳಿದುಬಂದಿದೆ. ಫೇಸ್ಬುಕ್ನಲ್ಲಿ ಪರಿಚಯವಾದ ನಂತರ ಆಕೆಯ ರೀತಿಯಲ್ಲೇ ವಿಶೇಷಚೇತನನಾಗಿದ್ದ ಯುವನಕೋರ್ವ ಮೈಸೂರಿಗೆ ಬಂದು, ಆಕೆಯನ್ನು ಬನಸ್ಕಾಂತಕ್ಕೆ ಕರೆದುಕೊಂಡು ಹೋಗಿ, ಪಾಲನ್ಪುರ ಪಾತಾಳೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದನು.