ನಾಪತ್ತೆಯಾದ ಮಗು ಶವವಾಗಿ ಪತ್ತೆ, ಆರೋಪಿ ಬಂಧನ ಎರ್ನಾಕುಲಂ: ಆಲುವಾದಲ್ಲಿ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಲುವಾ ಮಾರುಕಟ್ಟೆ ಬಳಿ ದೊರೆತ ಕಟ್ಟಿದ ಗೋಣಿಚೀಲ ವೊಂದರಲ್ಲಿ ಬಾಲಕಿಯ ಮೃತ ದೇಹ ಪತ್ತೆಯಾಗಿದೆ. ಬಾಲಕಿಯನ್ನು ಅಪಹರಿಸಿದ್ದ ಬಿಹಾರ ಮೂಲದ ಅಸ್ಫಾಕ್ ಆಲಂ ಎಂಬಾತ ಸಿಕ್ಕಿಬಿದ್ದಿದ್ದು, ಬಾಲಕಿಗಾಗಿ ವ್ಯಾಪಕ ಶೋಧ ನಡೆಸಿದಾಗ ಶವ ಪತ್ತೆಯಾಗಿದೆ.
21 ಗಂಟೆ ಶೋಧ ಕಾರ್ಯಾಚರಣೆ:ಮಗುವನ್ನು ಜಾಕೀರ್ಗೆ ಒಪ್ಪಿಸಿರುವುದಾಗಿ ಆರೋಪಿ ಅಸ್ಫಾಕ್ ಆಲಂ ಬೆಳಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಆಲುವಾ ಮೇಲ್ಸೇತುವೆಯ ಕೆಳಗೆ ನಿನ್ನೆ ರಾತ್ರಿ ಸ್ನೇಹಿತ ಜಾಕೀರ್ಗೆ ಮಗುವನ್ನು ಒಪ್ಪಿಸಿರುವುದಾಗಿಯೂ ಆರೋಪಿ ಹೇಳಿದ್ದಾನೆ. ಇದರ ಬೆನ್ನಲ್ಲೇ ಪೊಲೀಸರು ಅಸ್ಫಾಕ್ ಆಲಂ ಮತ್ತು ಜಾಕೀರ್‌ನನ್ನು ಪರಿಚಯಿಸಿದ ವ್ಯಕ್ತಿಯನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಗು ಮಾರಾಟ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಾಪತ್ತೆಯಾದ ಇಪ್ಪತ್ತು ಗಂಟೆಗಳ ನಂತರ ಮಗುವಿನ ಶವ ಪತ್ತೆಯಾಗಿದೆ.
ಬಿಹಾರ ನಿವಾಸಿಯ ಪುತ್ರಿ: ಕಳೆದ ಐದು ವರ್ಷಗಳಿಂದ ಆಲುವಾದ ತಾಯಕಟ್ಟುಕರದಲ್ಲಿ ನೆಲೆಸಿರುವ ಬಿಹಾರ ಮೂಲದ ದಂಪತಿಯೊಬ್ಬರ ಪುತ್ರಿ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದಳು. ಆರೋಪಿ ಅಸ್ಫಾಕ್ ಮಗುವಿಗೆ ಜ್ಯೂಸ್ ಕೊಡಿಸುವುದಾಗಿ ಹೇಳಿ ಅಪಹರಿಸಿದ್ದ. ಈ ಹಿನ್ನೆಲೆ ಆಲುವಾ ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿಸಿದಾಗ ಆತ ಕುಡಿದ ಮತ್ತಿನಲ್ಲಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ (28.07.23) ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬಾಲಕಿ ನಾಪತ್ತೆಯಾದ ಬಳಿಕ ನಡೆಸಿದ ತನಿಖೆಯಲ್ಲಿ ಬಾಲಕಿ ಬಿಹಾರ ಮೂಲದವನ ಜತೆ ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಲಭ್ಯವಾಗಿತ್ತು. ಅವರು ಕೆಎಸ್‌ಆರ್‌ಟಿ ಬಸ್‌ನಲ್ಲಿ ಮಗುವನ್ನು ಹೊತ್ತೊಯ್ಯುತ್ತಿರುವುದು ಪತ್ತೆಯಾಗಿತ್ತು. ಆರೋಪಿ ಮದ್ಯದ ಅಮಲಿನಲ್ಲಿದ್ದ ಕಾರಣ ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ಆತನಿಂದ ಹೆಚ್ಚಿನ ಮಾಹಿತಿ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆಯಿಂದ ಆರೋಪಿ ವಿಚಾರಿಸಿದಾಗ ಇನ್ನಷ್ಟು ಸಂಗತಿಗಳನ್ನು ಬಹಿರಂಗಗೊಂಡಿವೆ.
ಜ್ಯೂಸ್ ಖರೀದಿಸಿದ ಬಳಿಕ ಮಗುವನ್ನು ನೋಡಿಲ್ಲ ಎಂದು ಆರೋಪಿ ಸುಳ್ಳು ಹೇಳಿಕೆ ನೀಡಿದ್ದಾನೆ. ಹೆಚ್ಚಿನ ವಿಚಾರಣೆ ವೇಳೆ ಮಗುವನ್ನು ಬೇರೆಯವರಿಗೆ ಹಸ್ತಾಂತರಿಸಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ, ಮೃತದೇಹ ಪತ್ತೆಯಾಗಿದ್ದು ಆರೋಪಿ ಅಸ್ಫಾಕ್ ಕೊಲೆ ಮಾಡಿದ್ದಾನೆಯೇ ಅಥವಾ ಕೊಲೆಗೆ ಬೇರೆಯವರ ಸಹಾಯ ಪಡೆದಿದ್ದಾನೆಯೇ ಎಂಬಿತ್ಯಾದಿ ವಿಷಯಗಳ ಕುರಿತು ಪೊಲೀಸರು ವಿಸ್ತೃತ ತನಿಖೆ ನಡೆಸಲಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ: ಮಗು ನಾಪತ್ತೆಯಾದಗಿನಿಂದಲೂ ಮಗುವಿನ ಪೋಷಕರ ರೋದನೆ ನಿಂತಿಲ್ಲ. ಮಾರುಕಟ್ಟೆಯಲ್ಲಿ ದೊರೆತ ಚೀಲವೊಂದರಲ್ಲಿ ಮಗುವಿನ ಮೃತದೇಹವನ್ನು ನೋಡಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಇನ್ನಷ್ಟು ಮಾಹಿತಿ ತಿಳಿದು ಬರಲಿದೆ.
ಓದಿ:ಮಂಗಳೂರು: ಸಂಚರಿಸುತ್ತಿದ್ದ ರೈಲಿಗೆ ಹತ್ತಲು ಹೋದ ವೃದ್ಧನನ್ನು ರಕ್ಷಿಸಿದ ರೈಲ್ವೇ ಸಿಬ್ಬಂದಿ