ಪಾಲಕ್ಕಾಡ್ (ಕೇರಳ): ಕಾಡಾನೆ ಹಿಂಡಿನಿಂದ ಬೇರ್ಪಟ್ಟ ಮರಿಯಾನೆ 'ಕಣ್ಮಣಿ'ಗೆ ಮರು ಜೀವ ಸಿಕ್ಕಿದೆ. ಇಲ್ಲಿನ ಅಟ್ಟಪಾರಿ ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಿಂಡಿನಿಂದ ಬೇರ್ಪಟ್ಟು ಒಂಟಿಯಾಗಿ ತಿರುಗುತ್ತಿದ್ದ ಆನೆಮರಿಯನ್ನು ಪಾಲಕ್ಕಾಡಿನ ಆನೆ ಶಿಬಿರಕ್ಕೆ ಕರೆತರಲಾಗಿತ್ತು. ಇಲ್ಲಿ ಆನೆ ಮರಿಗೆ ಪಶುವೈದ್ಯರು ಮತ್ತು ಅರಣ್ಯಾಧಿಕಾರಿಗಳು ಆರೈಕೆ ಮಾಡಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಇಲ್ಲಿನ ಅಟ್ಟಪಾರಿ ಅರಣ್ಯ ಪ್ರದೇಶದ ಕೂಚಿಕಡವ್ ಎಂಬಲ್ಲಿ ಕಾಡಾನೆ ಗುಂಪಿನಿಂದ ಮರಿ ಆನೆ ಬೇರ್ಪಟ್ಟಿತ್ತು. ಒಂಟಿಯಾಗಿದ್ದ ಮರಿಯಾನೆಯನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದರು. ಈ ವೇಳೆ, ಆನೆ ಮರಿಯ ಮೈ ತುಂಬಾ ಗಾಯಗಳಾಗಿದ್ದವು. ಬಳಿಕ ಆನೆ ಮರಿಯನ್ನು ಅಟ್ಟಪಾರಿ ಅರಣ್ಯ ಪ್ರದೇಶದಲ್ಲೇ ಇದ್ದು ಕಾಡಾನೆ ಹಿಂಡಿಗೆ ಸೇರಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನಪಟ್ಟಿದ್ದರು. ಆದರೆ, ಅವರ ಪ್ರಯತ್ನ ವಿಫಲವಾಗಿತ್ತು.
ಅರಣ್ಯ ಅಧಿಕಾರಿಗಳು ಸತತ ಏಳು ದಿನಗಳ ಕಾಲ ಆನೆಮರಿಯನ್ನು ಕಾಡಾನೆ ಹಿಂಡಿಗೆ ಸೇರ್ಪಡೆ ಮಾಡಲು ಪ್ರಯತ್ನಿಸಿದರು. ಆದರೆ ಇವರ ಪ್ರಯತ್ನ ಸಫಲವಾಗದಿದ್ದಾಗ ಆನೆಮರಿಯನ್ನು ಸ್ಥಳದಲ್ಲೇ ಬಿಟ್ಟು ಬಂದರೆ ಬೇರೆ ಪ್ರಾಣಿಗಳ ದಾಳಿಗೀಡಾಗುವ ಸಾಧ್ಯತೆ ಇತ್ತು. ಅಲ್ಲದೆ ಆನೆ ಮರಿ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದ ಹಿನ್ನೆಲೆ ಅಧಿಕಾರಿಗಳು ಆನೆಮರಿಯನ್ನು ಅಟ್ಟಪಾರಿ ಅರಣ್ಯಪ್ರದೇಶದಿಂದ ನೇರವಾಗಿ ಪಾಲಕ್ಕಾಡಿನ ಆನೆ ಶಿಬಿರಕ್ಕೆ ತಂದಿದ್ದರು. ಬಳಿಕ ಇಲ್ಲಿ ಪಶುವೈದ್ಯರು ಮತ್ತು ಅರಣ್ಯ ಅಧಿಕಾರಿಗಳು ಆನೆ ಮರಿಗೆ ಆರೈಕೆ ಮಾಡಿದ್ದು, ಈಗ ಆನೆಮರಿ ಚೇತರಿಸಿಕೊಂಡಿದೆ. ಈ ಮರಿಗೆ ಕಣ್ಮಣಿ ಎಂದು ಹೆಸರಿಡಲಾಗಿದೆ.