ನವದೆಹಲಿ: ದೆಹಲಿಗಾಗಿ ಕೆಲಸ ಮಾಡಲು ನಾನು ಬಿಜೆಪಿ ಮತ್ತು ಕಾಂಗ್ರೆಸ್‌ನ ಸಹಕಾರ ಕೋರುತ್ತೇನೆ. ದೆಹಲಿಯನ್ನು ಉತ್ತಮಗೊಳಿಸಲು ಪ್ರಧಾನಿಯವರ ಆಶೀರ್ವಾದ ಬೇಡುತ್ತೇನೆ ಮತ್ತು ಅದಕ್ಕಾಗಿ ಕೇಂದ್ರಕ್ಕೆ ಮನವಿ ಮಾಡುತ್ತೇನೆ. ದೆಹಲಿ ಮಹಾನಗರ ಪಾಲಿಕೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕು. ಇಂದು ದೆಹಲಿಯ ಜನತೆ ಇಡೀ ದೇಶಕ್ಕೆ ಸಂದೇಶ ನೀಡಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಮಹಾನಗರಪಾಲಿಕೆಯಲ್ಲಿ ಆಮ್ ಆದ್ಮಿ ಪಕ್ಷವು 134 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಮರ್ಥ್ಯ ಪಡೆದಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿದ್ದಾರೆ. ಈ ಗೆಲುವಿಗಾಗಿ ನಾನು ದೆಹಲಿಯ ಜನರನ್ನು ಅಭಿನಂದಿಸುತ್ತೇನೆ ಮತ್ತು ಬದಲಾವಣೆಯನ್ನು ತಂದಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.