ನವದೆಹಲಿ:2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಲು ಜಂಟಿ ಕಾರ್ಯತಂತ್ರ ರೂಪಿಸುವ ಸಲುವಾಗಿ ಬೆಂಗಳೂರಿನಲ್ಲಿ ಇಂದಿನಿಂದ ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪಾಲ್ಗೊಳ್ಳಲಿದೆ ಎಂದು ಪಕ್ಷದ ನಾಯಕ ರಾಘವ್ ಚಡ್ಡಾ ಭಾನುವಾರ ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆಯ ನಂತರ ಮಾತನಾಡಿದ ಅವರು, ದೆಹಲಿಯಲ್ಲಿ ಆಡಳಿತ ನಿಯಂತ್ರಣ ಸೇವೆಗಳ ಕುರಿತ ಕೇಂದ್ರದ ಸುಗ್ರೀವಾಜ್ಞೆಯನ್ನು ಸಂಸತ್ತಿನಲ್ಲಿ ವಿರೋಧಿಸುವ ಕಾಂಗ್ರೆಸ್ ನಿರ್ಧಾರವನ್ನು ಸ್ವಾಗತಿಸಿದರು. ಇದೇ ವೇಳೆ ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಸಮಾನ ಮನಸ್ಕ ಪಕ್ಷಗಳ ಸಭೆಯಲ್ಲಿ ಕೇಜ್ರಿವಾಲ್ ನೇತೃತ್ವದಲ್ಲಿ ಎಎಪಿ ಭಾಗವಹಿಸಲಿದೆ ಎಂದು ತಿಳಿಸಿದರು.
"ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯು ಸಭೆ ಸೇರಿ ವಿಸ್ತೃತ ಚರ್ಚೆ ನಡೆಸಿತು. ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಕರೆಯ ಮೇರೆಗೆ ಟಿಎಂಸಿ, ಆರ್‌ಜೆಡಿ, ಜೆಡಿಯು, ಡಿಎಂಕೆ, ಬಿಆರ್ಎಸ್, ಎನ್ಸಿಪಿ, ಎಸ್‌ಪಿ, ಶಿವಸೇನೆ (ಯುಬಿಟಿ), ಸಿಪಿಐ, ಸಿಪಿಐ(ಎಂ), ಜೆಎಂಎಂ ಈ ಎಲ್ಲ ಪಕ್ಷಗಳು ಕರಾಳ ಸುಗ್ರೀವಾಜ್ಞೆಯ ವಿರುದ್ಧ ಧ್ವನಿ ಎತ್ತಿದವು. ಸಂಸತ್ತಿನಲ್ಲಿ ಮಸೂದೆಯನ್ನು ವಿರೋಧಿಸಲು ಬೆಂಬಲ ನೀಡುವ ಭರವಸೆ ನೀಡಿವೆ. ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕೂಡ ತನ್ನ ನಿಲುವು ಸ್ಪಷ್ಟಪಡಿಸಿದೆ, ತಾನು ಸುಗ್ರೀವಾಜ್ಞೆಯ ಪರವಾಗಿಲ್ಲ ಎಂದು ತಿಳಿಸಿದೆ. ಇದು ಸಕಾರಾತ್ಮಕ ಬೆಳವಣಿಗೆ, ನಾವು ಇದನ್ನು ಸ್ವಾಗತಿಸುತ್ತೇವೆ" ಎಂದರು.
ಬೆಂಗಳೂರಿನಲ್ಲಿ ನಡೆಯುವ ಪ್ರತಿಪಕ್ಷಗಳ ಸಭೆಯ ಮೊದಲ ದಿನ ಸೋನಿಯಾ ಗಾಂಧಿ ಅವರು ಎಲ್ಲ ನಾಯಕರನ್ನು ಭೋಜನಕ್ಕೆ ಆಹ್ವಾನಿಸಿದ್ದಾರೆ. ಕೇಜ್ರಿವಾಲ್ ಅವರನ್ನೂ ಸಹ ಆಹ್ವಾನಿಸಲಾಗಿದೆ. ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಒಟ್ಟು 17 ವಿರೋಧ ಪಕ್ಷಗಳು ಭಾಗವಹಿಸಿದ್ದು, ಇದೀಗ ಬೆಂಗಳೂರಿನಲ್ಲಿ ನಡೆಯಲಿರುವ ಸಭೆಗೆ 8 ಹೊಸ ವಿರೋಧ ಪಕ್ಷಗಳಿಗೆ ಆಹ್ವಾನ ಕಳುಹಿಸಲಾಗಿದೆ.