ನವದೆಹಲಿ: ಫೆಬ್ರವರಿ 19 ರಂದು ಬಜೆಟ್ ತಯಾರಿಯಲ್ಲಿದ್ದು ಅಬಕಾರಿ ನೀತಿ ಪ್ರಕರಣದ ವಿಚಾರಣೆಯನ್ನು ಕೊನೆಯ ವಾರಕ್ಕೆ ಮುಂದೂಡುವಂತೆ ಕೋರಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಕೇಳಿಕೊಂಡಿದ್ದರು. ಅದರಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸೋಡಿಯಾ ಅವರಿಗೆ ಸಿಬಿಐ ಸೂಚಿಸಿತ್ತು. ಬೆಳಗ್ಗೆ ತನಿಖಾ ದಳದ ಕಚೇರಿಗೆ ಆಗಮಿಸುವ ಮುನ್ನ ಸಚಿವರು, ತಮ್ಮ ನಿವಾಸದಿಂದ ರಾಜ್ ಘಾಟ್‌ವರೆಗೆ ರ್‍ಯಾಲಿ ನಡೆಸಿದರು.
ಸಿಬಿಐ ಕಚೇರಿಗೆ ತೆರಳುವ ಮಾರ್ಗಮಧ್ಯೆ ಭಾಷಣ ಮಾಡಿದ ಅವರು, "ನನ್ನನ್ನು ಬಂಧಿಸಲು ಕೆಲವು ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ನಾನು ಜೈಲಿಗೆ ಹೋಗಲು ಹೆದರುವುದಿಲ್ಲ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಪಿಮುಷ್ಟಿಯಿಂದ ಎಎಪಿ ರಾಷ್ಟ್ರವನ್ನು ಮುಕ್ತಗೊಳಿಸಲಿದೆ" ಎಂದು ಹೇಳಿದರು.
ಇದಕ್ಕೂ ಮುನ್ನ ಟ್ವಿಟ್ ಮಾಡಿದ್ದ ಸಿಸೋಡಿಯಾ, ಜೈಲಿಗೆ ಹೋಗುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾನು ಭರತ್ ಸಿಂಗ್ ಅವರ ಅನುಯಾಯಿ ಎಂದು ತಿಳಿಸಿದ್ದಾರೆ. ಇಂದು ಮತ್ತೆ ಸಿಬಿಐಗೆ ಹೋಗುತ್ತಿದ್ದೇನೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಆಪ್‌ನ ದೆಹಲಿ ಘಟಕದ ಕಾರ್ಯಕರ್ತರು ಉಪ ಮುಖ್ಯಮಂತ್ರಿ ನಿವಾಸದ ಸುತ್ತ ನೆರೆದಿದ್ದರು. ನಿವಾಸದ ಹೊರಗೆ ಭಾರಿ ಭದ್ರತೆ ಕೈಗೊಳ್ಳಲಾಗಿತ್ತು. ಈ ವೇಳೆ ಎಎಪಿ ಕಾರ್ಯಕರ್ತರು ಮನೀಶ್ ಸಿಸೋಡಿಯಾ ಅವರಿಗೆ ಗೃಹಬಂಧನ ವಿಧಿಸಲಾಗುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮತ್ತೊಂದೆಡೆ, ಇಂದು ಸಿಸೋಡಿಯಾ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಅಬಕಾರಿ ನೀತಿ ಪ್ರಕರಣದ ಹೆಸರಿನಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ದೂರಿದ್ದಾರೆ. ಅಬಕಾರಿ ನೀತಿಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪ್ರಶ್ನಿಸಲು ಸಿಬಿಐ ಮನೀಶ್ ಸಿಸೋಡಿಯಾಗೆ ಸಮನ್ಸ್ ನೀಡಿದೆ.
ಎಎಪಿ ನಾಯಕರು ಸಿಬಿಐ ಸಮನ್ಸ್ ಅನ್ನು ಸಿಸೋಡಿಯಾ ಅವರನ್ನು ಬಂಧಿಸುವ ತಂತ್ರ ಮತ್ತು ಇದು ರಾಜಕೀಯ ಪ್ರತಿಸ್ಪರ್ಧಿಗಳನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಈಗಾಗಲೇ ಎಎಪಿ ಸಂಚಾಲಕ ಕೇಜ್ರಿವಾಲ್ ಅವರು ತಮ್ಮ ಸರ್ಕಾರದ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದು, ದೆಹಲಿಯಲ್ಲಿ ನಡೆದ ಮದ್ಯ ಹಗರಣದ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಸಿಸೋಡಿಯಾ ಹೆಸರು ನೇರವಾಗಿ ಎಲ್ಲಿಯೂ ಪ್ರಸ್ತಾಪ ಆಗಿಲ್ಲ. ಪ್ರಕರಣದಲ್ಲಿ ಉದ್ಯಮಿಯೊಬ್ಬರನ್ನು ಬಂಧಿಸಲಾಗಿದೆ.
ಭಾನುವಾರ ಟ್ಟೀಟ್ ಮಾಡಿದ್ದ ಕೇಜ್ರಿವಾಲ್ ಸಮಾಜಕ್ಕಾಗಿ ಜೈಲಿಗೆ ಹೋಗುವುದು ಶಾಪವಲ್ಲ ಎಂದಿದ್ದಾರೆ. ಹಿಂದಿಯಲ್ಲಿ ಟ್ವಿಟ್ ಮಾಡಿದ್ದ ಅವರು, "ಸರ್ವಶಕ್ತನು ಮನೀಶ್ ಜೊತೆಗಿದ್ದಾನೆ. ಲಕ್ಷಾಂತರ ಮಕ್ಕಳು ಮತ್ತು ಪೋಷಕರ ಆಶೀರ್ವಾದವಿದೆ. ನೀವು ದೇಶಕ್ಕಾಗಿ ಜೈಲಿಗೆ ಹೋದಾಗ ಅದು ಶಾಪವಲ್ಲ. ನೀವು ಶೀಘ್ರದಲ್ಲೇ ಜೈಲಿನಿಂದ ಹಿಂತಿರುಗಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಬರೆದಿದ್ದಾರೆ.
ಇದನ್ನೂ ಓದಿ:ದೆಹಲಿ ಅಬಕಾರಿ ನೀತಿ ಕೇಸ್: ವಿಚಾರಣೆ ಮುಂದೂಡುವಂತೆ ಸಿಬಿಐಗೆ ಸಿಸೋಡಿಯಾ ಮನವಿ