ನವ ದೆಹಲಿ: 2024ರ ಸಾರ್ವತ್ರಿಕ ಚುನಾವಣೆಗೆ ಬಿಜೆಪಿಯೇತರ ರಂಗವನ್ನು ನಿರ್ಮಿಸಬೇಕಾದರೆ ಕಾಂಗ್ರೆಸ್ ಉತ್ತಮ ಧ್ರುವವಾಗಬಹುದು. ಹರಿಯಾಣ ಮತ್ತು ಪಂಜಾಬ್ ಹೊರತುಪಡಿಸಿ ದೆಹಲಿಯ ಹೊರಗೆ ಆಮ್ ಆದ್ಮಿ ಪಕ್ಷಕ್ಕೆ ಹೆಚ್ಚಿನ ಆಕರ್ಷಣೆ ಇಲ್ಲ ಎಂದು ಎಂದು ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಭಾನುವಾರ ಪ್ರತಿಪಾದಿಸಿದರು.
ಗುಜರಾತ್ ಸೋಲಿನಿಂದ ಕಾಂಗ್ರೆಸ್ ಕಲಿಯಬೇಕಾದ ಪಾಠಗಳಿವೆ ಎಂದು ಒತ್ತಿ ಹೇಳಿದ ಚಿದಂಬರಂ, ಕಠಿಣ ಹೋರಾಟದ ಚುನಾವಣೆಯಲ್ಲಿ ಮೌನ ಪ್ರಚಾರದಂಥ ಯೋಜನೆ ಕೆಲಸಕ್ಕೆ ಬರಲ್ಲ ಎಂದು ಹೇಳಿದರು. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ಈ ಹಿಂದೆ ಗೋವಾ ಮತ್ತು ಉತ್ತರಾಖಂಡ್‌ನಲ್ಲಿ ಮಾಡಿದಂತೆ ಆಮ್ ಆದ್ಮಿ ಪಕ್ಷವು (ಎಎಪಿ) ಗುಜರಾತ್‌ನಲ್ಲಿ ಆಟ ಕೆಡಿಸಿದೆ ಎಂದು ಹೇಳಿದರು. ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆಗಳು ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಇತ್ತೀಚಿನ ಚುನಾವಣೆಗಳ ಕುರಿತು ವಿಶ್ಲೇಷಣೆ ಮಾಡಿದ ಅವರು, ಬಿಜೆಪಿ ಈ ಹಿಂದೆ ಮೂರರಲ್ಲಿ ಅಧಿಕಾರದಲ್ಲಿದ್ದರೂ ಎರಡರಲ್ಲಿ ಸೋತಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ಇದು ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಹಿಮಾಚಲ ಪ್ರದೇಶ ಮತ್ತು ಎಂಸಿಡಿಯಲ್ಲಿ ಅವರನ್ನು ನಿರ್ಣಾಯಕವಾಗಿ ಸೋಲಿಸಲಾಗಿದೆ ಎಂಬ ಅಂಶವನ್ನು ಗುಜರಾತ್ ಗೆಲುವಿನಿಂದ ಮರೆಮಾಡಲು ಸಾಧ್ಯವಿಲ್ಲ ಎಂದು ಚಿದಂಬರಂ ಹೇಳಿದರು. ಹಿಮಾಚಲ ಪ್ರದೇಶದಲ್ಲಿ ಒಟ್ಟಾರೆ ಮತಗಳ ಅಂತರ ಕಡಿಮೆ ಇರಬಹುದು. ಆದರೆ ಇದು ರಾಜ್ಯಾದ್ಯಂತ ಅಧ್ಯಕ್ಷೀಯ ರೀತಿಯ ಚುನಾವಣೆಯಾಗಿರಲಿಲ್ಲ. ಇದು ಕ್ಷೇತ್ರವಾರು ಚುನಾವಣೆ. ನಾವು ಪ್ರತಿ ಕ್ಷೇತ್ರದಲ್ಲಿನ ಮತಗಳ ಅಂತರವನ್ನು ನೋಡಬೇಕು. ಕಾಂಗ್ರೆಸ್ ಗೆದ್ದಿರುವ 40 ಕ್ಷೇತ್ರಗಳ ಪೈಕಿ ಹಲವು ಕ್ಷೇತ್ರಗಳಲ್ಲಿ ಅಂತರ ಗಣನೀಯವಾಗಿದೆ. ಕ್ಷೇತ್ರವಾರು ಚುನಾವಣೆಯಲ್ಲಿ ರಾಜ್ಯಾದ್ಯಂತದ ಸೋಲು ಗೆಲುವಿನ ಅಂತರವನ್ನು ಪರಿಗಣಿಸುವ ಕ್ರಮ ಸೂಕ್ತವಲ್ಲ ಎಂದು ಹೇಳಿದರು.
ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಸಾಮಾನ್ಯ ಸಂಪ್ರದಾಯದಂತೆ ಪ್ರತಿ ಚುನಾವಣೆಯಲ್ಲಿ ಪಕ್ಷವು ತನ್ನ ಅತ್ಯುತ್ತಮ ಪ್ರಯತ್ನ ಮಾಡಬೇಕು ಮತ್ತು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳು ಅಂದರೆ ಮಾನವ, ವಸ್ತು ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಬಳಸಿ ಹೋರಾಟ ಮಾಡಬೇಕೆಂಬುದನ್ನು ನಾನು ನಂಬುತ್ತೇನೆ ಎಂದು ಚಿದು ಹೇಳಿದರು.
ಇದನ್ನೂ ಓದಿ: ಒವೈಸಿ, ಆಪ್, ಎಸ್ಡಿಪಿಐ ಪಕ್ಷಗಳಿಗೆ ಬಿಜೆಪಿ ಫಂಡಿಂಗ್: ಎಂಎಲ್ಸಿ ಹರೀಶ್ ಕುಮಾರ್ ಆಪಾದನೆ