ಕರ್ನಾಟಕ

karnataka

ETV Bharat / bharat

ಸರ್ಕಾರ ಕೆಡವಲು ಬಿಜೆಪಿಯಿಂದ ₹1375 ಕೋಟಿ ಆಫರ್​: ಪಂಜಾಬ್​ ಸಚಿವ ಗಂಭೀರ ಆರೋಪ - ಕುದುರೆ ವ್ಯಾಪಾರ

ದೆಹಲಿಯಲ್ಲಿ ಕೇಳಿ ಬಂದ ಆಪರೇಷನ್​ ಕಮಲ ಇದೀಗ ಪಂಜಾಬ್​ಗೂ ವಿಸ್ತರಣೆಯಾಗಿದೆ. ಪಂಜಾಬ್​ ಸರ್ಕಾರ ಕೆಡವಲು ಬಿಜೆಪಿ ಯತ್ನ ನಡೆಸುತ್ತಿದ್ದು, ಶಾಸಕರ ಖರೀದಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಲಾಗಿದೆ ಎಂದು ಪಂಜಾಬ್​ ಸರ್ಕಾರದ ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

aap-serious-allegation
ಪಂಜಾಬ್​ ಸಚಿವ ಗಂಭೀರ ಆರೋಪ

By

Published : Sep 13, 2022, 5:09 PM IST

ಚಂಡೀಗಢ: ದೆಹಲಿ ಆಮ್​ ಆದ್ಮಿ ಪಕ್ಷದ ಶಾಸಕರನ್ನು ಬಿಜೆಪಿ ಸೆಳೆಯಲು ಯತ್ನಿಸಿದೆ ಎಂಬ ಆರೋಪದ ಬಳಿಕ ಇದೀಗ ಪಂಜಾಬ್​ನಲ್ಲೂ ಆಪರೇಷನ್​ ಕಮಲದ ದೂರು ಕೇಳಿಬಂದಿದೆ. ಪಂಜಾಬ್​ ಹಣಕಾಸು ಸಚಿವರೇ ಈ ಆರೋಪವನ್ನು ಮಾಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆ ಬಿಸಿಯೇರಿದೆ.

ಪಂಜಾಬ್‌ನಲ್ಲಿ ಎಎಪಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ. ಆಪ್​ ಶಾಸಕರನ್ನು ಖರೀದಿಸಲು ಆ ಪಕ್ಷದ ನಾಯಕರು ಮುಂದಾಗಿದ್ದಾರೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಆಮಿಷವನ್ನು ಒಡ್ಡಲಾಗಿದೆ ಎಂದು ಎಎಪಿ ನಾಯಕ ಮತ್ತು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಚೀಮಾ ಗಂಭೀರ ಆರೋಪ ಮಾಡಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಪಾಲ್ ಚೀಮಾ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೇ, ಪಂಜಾಬ್​ನಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ. ಎಎಪಿಯ 10 ಶಾಸಕರನ್ನು ಕುದುರೆ ವ್ಯಾಪಾರ ಮಾಡಲು ಅವರನ್ನು ಸಂಪರ್ಕಿಸಲಾಗಿದೆ.

ಆಪ್​ ಸರ್ಕಾರ ಉರುಳಿಸಲು 1375 ಕೋಟಿ ರೂಪಾಯಿ ಆಫರ್​ ನೀಡಲಾಗಿದೆ. 7 ರಿಂದ 10 ಶಾಸಕರನ್ನು ಆಪರೇಷನ್​ ಕಮಲ ಮಾಡಲು ಹೊಂಚು ಹಾಕಲಾಗಿದೆ ಎಂದು ಆಪಾದಿಸಿದರು.

ಪ್ರತಿ ಶಾಸಕರಿಗೆ 25 ಕೋಟಿ ರೂ. ಆಫರ್​:ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರ ಖರೀದಿಗೆ ಪ್ರತಿಯೊಬ್ಬರಿಗೆ 25 ಕೋಟಿ ಆಫರ್​ ನೀಡಲಾಗಿದೆ. ಬಿಜೆಪಿ ಈ ಹಿಂದೆ ಗೋವಾ, ಕರ್ನಾಟಕ, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶದಲ್ಲಿ ಇದೇ ರೀತಿ ಮಾಡಿದೆ. ಈಗ ಪಂಜಾಬ್‌ನಲ್ಲಿಯೂ ಸರ್ಕಾರವನ್ನು ಕಿತ್ತೊಗೆಯಲು ಪ್ಲಾನ್​ ಮಾಡಿದೆ ಎಂದು ಟೀಕಿಸಿದರು.

ಆಪ್​ ಶಾಸಕರಿಗೆ ಸಾಂವಿಧಾನಿಕ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿಯ ಬೆದರಿಕೆಯೊಡ್ಡಲಾಗಿದೆ. ಪ್ರತಿ ಶಾಸಕರಿಗೆ 25 ಕೋಟಿಯಂತೆ 1375 ಕೋಟಿ ಕಪ್ಪುಹಣವನ್ನು ನೀಡುವ ಆಮಿಷ ಒಡ್ಡಲಾಗಿದೆ. ಕನಿಷ್ಠ 10 ಆಪ್​ ಶಾಸಕರನ್ನು ಬಿಜೆಪಿ ಸಂಪರ್ಕಿಸಿದೆ ಎಂದು ಅವರು ಆರೋಪ ಮಾಡಿದರು.

ಕೆಲ ದಿನಗಳ ಹಿಂದಷ್ಟೇ ದೆಹಲಿ ಆಪ್​ ಸರ್ಕಾರವನ್ನು ಕೆಡವಲು ಬಿಜೆಪಿ ಯತ್ನ ನಡೆಸುತ್ತಿದೆ. ಕುದುರೆ ವ್ಯಾಪಾರಕ್ಕೆ ಇಳಿದಿರುವ ಬಿಜೆಪಿ ಆಪ್​ ಶಾಸಕರನ್ನು ಖರೀದಿಸಲು ಮುಂದಾಗಿದೆ ಎಂದು ಆರೋಪಿಸಿದ್ದ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿ ಗೆಲುವು ಸಾಧಿಸಿದ್ದರು.

ಓದಿ:ಗುಜರಾತ್​ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಶೀಘ್ರ?

ABOUT THE AUTHOR

...view details