ಚಂಡೀಗಢ(ಪಂಜಾಬ್): ಇದೇ ಮೊದಲ ಬಾರಿಗೆ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರವನ್ನು ರಚಿಸುತ್ತಿದ್ದು, ಸಿಎಂ ಆಗಿ ಭಗವಂತ್ ಸಿಂಗ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ ಎರಡು ದಿನಗಳ ಬಳಿಕ ಕ್ಯಾಬಿನೆಟ್ ದರ್ಜೆಯ 10 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಪ್ ಪಕ್ಷ ಶಾಸಕರಾದ ಹರ್ಪಾಲ್ ಸಿಂಗ್ ಚೀಮಾ, ಡಾ.ಬಲ್ಜಿತ್ ಕೌರ್, ಹರ್ಭಜನ್ ಸಿಂಗ್ ಇಟಿಒ, ಡಾ.ವಿಜಯ್ ಸಿಂಗ್ಲಾ, ಲಾಲ್ ಚಂದ್ ಕತರುಚಕ್, ಗುರ್ಮೀತ್ ಸಿಂಗ್ ಮೀತ್ ಹಯೆರ್, ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲರ್, ಬ್ರಹ್ಮ್ ಶಂಕರ್ ಜಿಂಪಾ ಮತ್ತು ಹರ್ಜೋತ್ ಸಿಂಗ್ ಬೈನ್ಸ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪಂಜಾಬ್ ರಾಜ್ಯಪಾಲ ಭನ್ವಾರಿಲಾಲ್ ಪುರೋಹಿತ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದು, ಈ ಕಾರ್ಯಕ್ರಮದ ನಂತರ ಸಿಎಂ ಭಗವಂತ್ ಸಿಂಗ್ ಮಾನ್ ನೇತೃತ್ವದಲ್ಲಿ ಮೊದಲ ಕ್ಯಾಬಿನೆಟ್ ಸಭೆ ನಡೆಯಲಿದೆ.
ಪ್ರಮಾಣವಚನ ಸ್ವೀಕಾರದ ಬಳಿಕ ನೂತನ ಸಚಿವರ ಪ್ರತಿಕ್ರಿಯೆ:ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ. ವಿಜಯ್ ಸಿಂಗ್ಲಾ ಅವರು ರಾಜ್ಯದಲ್ಲಿ ಮಾದಕ ವ್ಯಸನ, ನಿರುದ್ಯೋಗದಂತಹ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ನಾವು ಕೆಲಸ ಮಾಡಬೇಕಾಗುತ್ತದೆ. ಪಂಜಾಬ್‌ನಲ್ಲಿ ನಾವು ಪ್ರಗತಿ ಸಾಧಿಸಬೇಕಾದರೆ ನಮಗೆ ಪ್ರತಿಪಕ್ಷಗಳ ಬೆಂಬಲ ಬೇಕಾಗುತ್ತದೆ.
ನೂತನ ಸಚಿವ ಹರ್ಪಾಲ್ ಸಿಂಗ್ ಚೀಮಾ ಮಾತನಾಡಿ, ನಾನು ಮೊದಲು ಜನರ ಸೇವಕನಾಗಿದ್ದೆನು. ಈಗಲೂ ಸೇವಕನಾಗಿದ್ದೇನೆ. ಸಚಿವರಾಗುವ ಯೋಚನೆಯೇ ಇಲ್ಲದ ನಮ್ಮಂತಹ ಜನಸಾಮಾನ್ಯರು ಮಂತ್ರಿಯಾಗಿದ್ದಾರೆ. ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.