ನವದೆಹಲಿ:ದೆಹಲಿ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಕಟ್ ಆಫ್ ಅಂಕಗಳನ್ನು ಕಡಿಮೆ ಮಾಡುವ ಮೂಲಕ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಬೇಕು ಎಂದು ಮನವಿ ಸಲ್ಲಿಸಿ ದೆಹಲಿ ಸಾಮಾಜ ಕಲ್ಯಾಣ ಸಚಿವ ರಾಜ್ ಕುಮಾರ್ ಆನಂದ್, ದೆಹಲಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೋ. ಯೋಗೇಶ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ, ದೆಹಲಿ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ಮೀಸಲಾತಿ ಸೀಟುಗಳಲ್ಲಿ 6 ಸಾವಿರ ಹಾಗೇ ಉಳಿದಿದೆ. ವಿಶ್ವವಿದ್ಯಾಲದಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ)ಆಧಾರದ ಮೇಲೆ ದೆಹಲಿ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಲು ಮುಂದೆ ಬರುವಂತೆ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು.
ಹಿಂದಿನ ವರ್ಷಗಳಲ್ಲಿ, ದೆಹಲಿ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯಲು ಎಸ್‌ಸಿ ವಿದ್ಯಾರ್ಥಿಗಳಿಗೆ ಕಟ್ - ಆಫ್ ಅಂಕಗಳಿಂದ ವಿನಾಯಿತಿ ನೀಡಲಾಗುತ್ತಿತ್ತು. ಈಗ ವಿಶ್ವವಿದ್ಯಾನಿಲಯದಲ್ಲಿ ಎಲ್ಲ ಸೀಟುಗಳು ಭರ್ತಿಯಾಗಿದ್ದು, ಪರಿಶಿಷ್ಟ ಸಮುದಾಯದ ಸೀಟುಗಳು ಖಾಲಿ ಉಳಿದಿದ್ದರೆ ದೆಹಲಿ ವಿಶ್ವವಿದ್ಯಾಲಯವು ಕಟ್ - ಆಫ್ ಅಂಕಗಳನ್ನು ಕಡಿಮೆ ಮಾಡುತ್ತಿತ್ತು.
ಆದರೆ, ಈ ವರ್ಷ ಸಿಯುಇಟಿಯಲ್ಲಿನ ಮಾರ್ಕ್ ಅಥವಾ ರ್ಯಾಂಕ್ ಆಧಾರತದ ಮೇಲೆ ದಾಖಲಾತಿ ಪ್ರಕ್ರಿಯೆ ಅನುಸರಿಸಲಾಗಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳು ಇದರಿಂದ ತೊಂದರೆ ಅನುಭವಿಸುವಂತೆ ಆಗಿದೆ. ಈ ಹಿನ್ನೆಲೆ ಈ ವಿಚಾರದ ಕುರಿತು ಮರು ಪರಿಶೀಲಿಸುವಂತೆ ನಾನು ಮನವಿ ಮಾಡುತ್ತೇನೆ. ದಯವಿಟ್ಟು ಎಸ್‌ಸಿ ವಿದ್ಯಾರ್ಥಿಗಳಿಗೆ ಕಟ್ - ಆಫ್ ಅಂಕಗಳನ್ನು ಕಡಿಮೆ ಮಾಡುವ ಮೂಲಕ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡುವ ಮೂಲಕ ದಾಖಲಾತಿ ಪ್ರಕ್ರಿಯೆಯನ್ನು ಸಡಿಲಗೊಳಿಸುವಂತೆ ಕೋರಿಕೊಳ್ಳುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.