ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನವನ್ನು ಜೂನ್ 1ರವರೆಗೆ ವಿಸ್ತರಿಸಿ ರೋಸ್ ಅವೆನ್ಯೂ ನ್ಯಾಯಾಲಯ ಆದೇಶಿಸಿದೆ. ಈ ಹಿಂದೆ ಸಿಸೋಡಿಯಾ ನ್ಯಾಯಾಂಗ ಬಂಧನವನ್ನು ಮೇ 23ರವರೆಗೆ ನ್ಯಾಯಾಲಯ ವಿಸ್ತರಿಸಿತ್ತು. ಇಂದಿಗೆ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಕೋರ್ಟ್ಗೆ ಪೊಲೀಸರು ಹಾಜರು ಪಡಿಸಿದ್ದರು.
ದೆಹಲಿ ಮದ್ಯ ನೀತಿ ಹಗರಣದಲ್ಲಿ ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ಮತ್ತು ಸಾಕ್ಷ್ಯಗಳ ನಾಶ ಮತ್ತು ವಿರೂಪಗೊಳಿಸಿದ ಆರೋಪದಡಿ ಮಾರ್ಚ್ 26ರಂದು ದೆಹಲಿ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಇದರ ನಂತರ ಜೈಲಿನಲ್ಲಿದ್ದ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ಮಾರ್ಚ್ 9ರಂದು ತಮ್ಮ ವಶಕ್ಕೆ ಪಡೆದಿದ್ದರು. ಇದೇ ಈ ಮದ್ಯ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬೇರೆಯವರ ಹೆಸರಲ್ಲಿನ ಸಿಮ್ ಕಾರ್ಡ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಖರೀದಿಸಿದ್ದಾರೆ ಎಂಬ ಆರೋಪ ಸಹ ಸಿಸೋಡಿಯಾ ವಿರುದ್ಧ ಕೇಳಿ ಬಂದಿದೆ.
ಮೋದಿ ವಿರುದ್ಧ ಸಿಸೋಡಿಯಾ ಟೀಕೆ: ಮಂಗಳವಾರ ನ್ಯಾಯಾಲಯ ಆವರಣದಲ್ಲಿ ಮನೀಶ್ ಸಿಸೋಡಿಯಾ ಪತ್ರಕರ್ತರೊಂದಿಗೆ ಮಾತನಾಡಲು ಪ್ರಯತ್ನಿಸಿದರು. ಈ ವೇಳೆ, ದೆಹಲಿಯಲ್ಲಿ ಅಧಿಕಾರಿಗಳು ವರ್ಗಾವಣೆ ಮತ್ತು ನಿಯೋಜನೆ ವಿವಾದ ಬಗ್ಗೆ ರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ ರಚನೆಗೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಸೋಡಿಯಾ, ಮೋದಿಜಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಅವರು ದುರಹಂಕಾರಿಯಾಗಿದ್ದಾರೆ ಎಂದು ಟೀಕಿಸಿದರು.