ಚಂಡೀಗಢ:ಭಗವಂತ್ ಮನ್ ನೇತೃತ್ವದ ಎಎಪಿ ಸರ್ಕಾರ ಪಂಜಾಬ್‌ನಲ್ಲಿನ ರಾಜಕೀಯ ಮತ್ತು ಧಾರ್ಮಿಕ ಮುಖಂಡರೂ ಸೇರಿದಂತೆ ವಿಐಪಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿದೆ. ಈ ಪೈಕಿ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರ ಭದ್ರತೆಯನ್ನು ಹಿಂತೆಗೆದುಕೊಂಡ ಮರುದಿನವೇ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಇತರರು ಪಂಜಾಬ್ ಸರ್ಕಾರವನ್ನು ಹತ್ಯೆಗೆ ಹೊಣೆಗಾರರನ್ನಾಗಿಸಿದೆ.
ಸಿಧು ಮೂಸೆವಾಲಾ ಹತ್ಯೆಗೆ ಸರ್ಕಾರ ಮತ್ತು ಪೊಲೀಸರ ನಿರ್ಲಕ್ಷ್ಯವೇ ಕಾರಣ. ಅವರಿಗಿದ್ದ ಭದ್ರತೆಯನ್ನು ಪೊಲೀಸರು ಹಿಂತೆಗೆದುಕೊಂಡ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಲಾಗಿದೆ. ಇದನ್ನು ಆಪ್ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿವೆ.
ಅಧಿಕೃತ ಆದೇಶದ ಪ್ರಕಾರ, ಭದ್ರತೆಯನ್ನು ಮೊಟಕುಗೊಳಿಸಿದ 424 ವಿಐಪಿಗಳಲ್ಲಿ ಮೂಸೆವಾಲಾ ಅವರ ಹೆಸರೂ ಇದ್ದ ಮಾಹಿತಿ ಶನಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆದೇಶದ ಪ್ರಕಾರ, ಮೂಸೆ ವಾಲಾ ಅವರಿಗೆ ವಹಿಸಿದ್ದ ಇಬ್ಬರು ಗನ್ಮ್ಯಾನ್ಗಳನ್ನು ಹಿಂಪಡೆಯಲಾಗಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರ ವಹಿಸಿಕೊಂಡ ನಂತರ ಮೂರು ಬಾರಿ ವಿಐಪಿಗಳ ಭದ್ರತೆಯನ್ನು ಕಡಿತಗೊಳಿಸಿತ್ತು.
184 ವಿಐಪಿಗಳ ಭದ್ರತೆ ಮೊದಲ ಬಾರಿಗೆ ಕಡಿತ: ಏಪ್ರಿಲ್ 23ರಂದು ಎಎಪಿ ಸರ್ಕಾರ 184 ವಿಐಪಿಗಳ ಭದ್ರತೆಯನ್ನು ಹಿಂತೆಗೆದುಕೊಂಡು ಗನ್ ಸಂಸ್ಕೃತಿಯನ್ನು ಕೊನೆಗೊಳಿಸವುದಾಗಿ ಹೇಳಿತ್ತು. ಆದರೆ ದುರಾದೃಷ್ಟವಶಾತ್ ಗಾಯಕ ಸಿಧು ಮೂಸೆವಾಲಾ ಭಾನುವಾರ ಮಾನ್ಸಾ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳಿಂದ ಅದೇ ಗನ್ ಸಂಸ್ಕೃತಿಗೆ ಬಲಿಯಾಗಿದ್ದಾರೆ.