ಕರ್ನಾಟಕ

karnataka

ETV Bharat / bharat

ಪಂಜಾಬ್, ರಾಷ್ಟ್ರೀಯ ರಾಜಕೀಯದಲ್ಲಿ ಎಎಪಿ ಆರ್ಭಟ: ಈ ಮಟ್ಟಕ್ಕೆ ಬೆಳೆಯುವ ಪಕ್ಷದ ಶ್ರಮ ಎಂತಹುದು ಗೊತ್ತಾ!? - election-2022

ಈಗ ಪಂಜಾಬ್​ನಲ್ಲಿ ಪೊರಕೆ ತನ್ನ ಕೊರಳಿಗೆ ಭರ್ಜರಿ ಜಯದ ಹಾರ ಹಾಕಿಕೊಂಡಿದೆ. ಇದರ ಹಿಂದೆ ಕೇಜ್ರಿವಾಲ್​ ಅವರ ರಣತಂತ್ರ ಕೆಲಸ ಮಾಡಿದೆ ಎಂಬುದನ್ನು ಗಮನಿಸಬೇಕಿದೆ. ಈ ಮೂಲಕ ದೇಶದ ಎರಡು ರಾಜ್ಯಗಳಲ್ಲಿ ಆಪ್​ ರಾಜ್ಯಭಾರ ಮಾಡಲಿದ್ದು, ಎಲ್ಲರನ್ನೂ ತನ್ನತ್ತ ಸೆಳೆಯುವಂತೆ ಮಾಡಿ, ಭವಿಷ್ಯದಲ್ಲಿ ಕಾಂಗ್ರೆಸ್​-ಬಿಜೆಪಿ ಹೊರತುಪಡಿಸಿದರೆ ಇದು ಪರ್ಯಾಯ ಎಂಬ ಸ್ಥಿತಿಗೆ ಈ ಪಕ್ಷವನ್ನು ಈಗಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಮೇಲ್ಮಟ್ಟಕ್ಕೆ ಏರಿಸಿದ್ದಾರೆ.

ಪಂಜಾಬ್, ರಾಷ್ಟ್ರೀಯ ರಾಜಕೀಯದಲ್ಲಿ ಎಎಪಿ ಆರ್ಭಟ
ಪಂಜಾಬ್, ರಾಷ್ಟ್ರೀಯ ರಾಜಕೀಯದಲ್ಲಿ ಎಎಪಿ ಆರ್ಭಟ

By

Published : Mar 10, 2022, 5:17 PM IST

Updated : Mar 10, 2022, 5:32 PM IST

ಹೈದರಾಬಾದ್​: ಎಎಪಿ ಈಗ ಮತ್ತೊಮ್ಮೆ ರಾಷ್ಟ್ರೀಯ ವೇದಿಕೆಗೆ ಬಂದಿದೆ. ಅದರಲ್ಲೂ ಈಗ ರಾಜಕೀಯದಲ್ಲಿ ಅಪರೂಪದ ಕ್ಷಣವಾಗಿದೆ. ಪಂಜಾಬ್​ನಲ್ಲಿ ಈಗ ಆಪ್ ತನ್ನದೇ ಸಾರ್ಮಾಜ್ಯ ನಿರ್ಮಾಣ ಮಾಡಲು ಮುಂದಾಗಿದ್ದು, ಇದರ ಹಿಂದೆ ಹಿಂದೆ ಪಕ್ಷದ ಮುಖ್ಯಸ್ಥರ ಜವಾಬ್ದಾರಿಯನ್ನು ಸ್ಮರಿಸಬೇಕಿದೆ. ಪ್ರಚಾರಕ್ಕೆ ಬೇಕಾದ ಹೋರ್ಡಿಂಗ್ಸ್​ಗಳನ್ನು ಹಿಡಿದು ಅಭ್ಯರ್ಥಿಗಳ ಆಯ್ಕೆವರೆಗೂ ಆಪ್​ ಮುಖ್ಯಸ್ಥರು ಎಡವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

“ನನಗೆ ಅಂಕಗಣಿತ ಅರ್ಥವಾಗುವುದಿಲ್ಲ. ಆದರೆ ನಾನು ಒಂದು ವಿಷಯವನ್ನು ಅರ್ಥ ಮಾಡಿಕೊಂಡಿದ್ದೇನೆ, ನಾನು ದೇಶದ ಪ್ರಗತಿಯನ್ನು ನೋಡಲು ಬಯಸುತ್ತೇನೆ. ಏಳು ವರ್ಷಗಳಲ್ಲಿ, ದೇಶದ ಶಾಲೆಗಳನ್ನು ಉತ್ತಮಗೊಳಿಸಬಹುದಿತ್ತು, ಬಡತನವನ್ನು ಹೋಗಲಾಡಿಸಬಹುದಿತ್ತು, ಆಸ್ಪತ್ರೆಗಳನ್ನು ಸುಧಾರಿಸಬಹುದಿತ್ತು, 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬಹುದಿತ್ತು ಮತ್ತು ದೇಶಕ್ಕೆ ಉತ್ತಮ ರಸ್ತೆಗಳನ್ನೂ ನೀಡಬಹುದಿತ್ತು. ಆದರೆ, ಅದು ಆಗಿಲ್ಲ. ಆದರೆ ನಾವು ಅದನ್ನು ಸಾಬೀತುಪಡಿಸಿದ್ದೇವೆ. ಮುಂದೆಯೂ ಮಾಡುತ್ತೇವೆ"

ಪಂಜಾಬ್, ರಾಷ್ಟ್ರೀಯ ರಾಜಕೀಯದಲ್ಲಿ ಎಎಪಿ ಆರ್ಭಟ

ಈ ಮಾತನ್ನು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗೋವಾ ಮತ್ತು ಉತ್ತರಾಖಂಡದ ಪ್ರಚಾರವನ್ನು ಮುಕ್ತಾಯಗೊಳಿಸಿದ ನಂತರ ಮತ್ತು ಪಂಜಾಬ್‌ನಲ್ಲಿ ಅಂತಿಮ ಹಂತದ ಪ್ರಚಾರವನ್ನು ಪ್ರಾರಂಭಿಸುವ ಮೊದಲು ಹೇಳಿದ್ದರು.

2013 -2022 ರ ಯಶಸ್ವಿ ಬೆಳವಣಿಗೆ:2013 ರಲ್ಲಿ ಭಾರತೀಯ ರಾಜಕೀಯ ರಂಗದಲ್ಲಿ ಮೊದಲ ಬಾರಿಗೆ ಸಿಡಿದೆದ್ದ ಕೇಜ್ರಿವಾಲ್ ಅವರ ಈ ಪ್ರತಿಕ್ರಿಯೆಯು ಅವರ ಹಳೆಯ ಸ್ವಭಾವವನ್ನು ಮತ್ತೆ ತೋರಿಸಿತ್ತು. ಅವರು ಆಪ್​ನ ಚೊಚ್ಚಲ ಚುನಾವಣೆಯಲ್ಲಿಯೇ 70 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಗಳಿಸಿದ್ದರು. ಅದಷ್ಟೆ ಅಲ್ಲದೆ ಮೂರು ಬಾರಿ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರನ್ನು ಸೋಲಿಸಿದ್ದು ದಾಖಲೆಯಾಗಿತ್ತು.

ಈ ನಡುವೆ ಈಗ ಪಂಜಾಬ್​ನಲ್ಲಿ ಪೊರಕೆ ತನ್ನ ಕೊರಳಿಗೆ ಭರ್ಜರಿ ಜಯದ ಹಾರ ಹಾಕಿಕೊಂಡಿದೆ. ಇದರ ಹಿಂದೆ ಕೇಜ್ರಿವಾಲ್​ ಅವರ ರಣತಂತ್ರ ಕೆಲಸ ಮಾಡಿದೆ ಎಂಬುದನ್ನು ಗಮನಿಸಬೇಕಿದೆ. ಈ ಮೂಲಕ ದೇಶದ ಎರಡು ರಾಜ್ಯಗಳಲ್ಲಿ ಆಪ್​ ರಾಜ್ಯಭಾರ ಮಾಡಲಿದ್ದು, ಎಲ್ಲರನ್ನೂ ತನ್ನತ್ತ ಸೆಳೆಯುವಂತೆ ಮಾಡಿ, ಭವಿಷ್ಯದಲ್ಲಿ ಕಾಂಗ್ರೆಸ್​- ಬಿಜೆಪಿ ಹೊರತುಪಡಿಸಿದರೆ ಇದು ಪರ್ಯಾಯ ಎಂಬ ಸ್ಥಿತಿಗೆ ಈ ಪಕ್ಷವನ್ನು ಈಗಲೇ ಅರವಿಂದ್​ ಕೇಜ್ರಿವಾಲ್​ ಮೇಲ್ಮಟ್ಟಕ್ಕೆ ಏರಿಸಿದ್ದಾರೆ.

ಪ್ರಾದೇಶಿಕ ಪಕ್ಷಗಳು ಮಾಡದ ಕೆಲಸವನ್ನು ಆಪ್​ ಮಾಡಿದೆ:ಪ್ರಮುಖ ವಿಷಯ ಅಂದ್ರೆ ಯಾವುದೇ ಪ್ರಾದೇಶಿಕ ಪಕ್ಷಗಳು ಮಾಡದ ಸಾಧನೆಯನ್ನು ಈ ಆಪ್​ ಮಾಡಿದೆ. ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ, ಬಿಜು ಜನತಾ ದಳ, ತೃಣಮೂಲ ಕಾಂಗ್ರೆಸ್, ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಡಿಎಂಕೆ, ಎಐಎಡಿಎಂಕೆ, ಜನತಾ ದಳ (ಜಾತ್ಯತೀತ) , ಜನತಾ ದಳ (ಯುನೈಟೆಡ್) ), LJP - ಇಲ್ಲಿಯವರೆಗೆ ಸಾಧಿಸಲು ಸಾಧ್ಯವಾಗದ್ದನ್ನು ಆಪ್​ ಸಾಧಿಸಿ ತೋರಿಸಿದೆ.

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​

ಪ್ರಸ್ತುತ, ಕಾಂಗ್ರೆಸ್, ಬಿಜೆಪಿ ಮತ್ತು ಎಡಪಕ್ಷಗಳನ್ನು ಹೊರತುಪಡಿಸಿ ದೆಹಲಿ ಮತ್ತು ಪಂಜಾಬ್ ಎರಡು ರಾಜ್ಯಗಳಲ್ಲಿ ಬಹುಮತದ ಸರ್ಕಾರಗಳನ್ನು ಹೊಂದಿರುವ ಏಕೈಕ ಪಕ್ಷ ಇದಾಗಿದೆ. ಈ ಗೆಲುವು ಭಾರತೀಯ ರಾಜಕೀಯ ಭೂಪಟದಲ್ಲಿನ ದೋಷಗಳನ್ನು ಬದಲಾಯಿಸಲು ಮುನ್ಸೂಚನೆಯಾಗಿದೆ.

ಪ್ರಚಾರದ ಕಾರ್ಯ ಹೇಗಿತ್ತು ಗೊತ್ತಾ?:ಪ್ರಚಾರದ ವಿಷಯಕ್ಕೆ ಬಂದರೆ ಪಂಜಾಬ್, ಗೋವಾ ಮತ್ತು ಉತ್ತರಾಖಂಡದ ಮೂರು ರಾಜ್ಯಗಳಲ್ಲಿ ಚುನಾವಣಾ ಪ್ರಚಾರವನ್ನು ಅರವಿಂದ್ ಕೇಜ್ರಿವಾಲ್​ ಅವರೇ ಮುನ್ನಡೆಸಿದ್ದರು. ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳ ಮೇಲೆ ಸಂದೇಶ ಬರೆಯುವುದರಿಂದ ಹಿಡಿದು ಕರಪತ್ರಗಳವರೆಗೆ, ಟೌನ್ ಹಾಲ್‌ಗಳಿಂದ ಮನೆ-ಮನೆಗೆ, ಅಭ್ಯರ್ಥಿಗಳ ಆಯ್ಕೆಯಿಂದ ಮುಖ್ಯಮಂತ್ರಿಗಳ ಮುಖಗಳನ್ನು ಗುರುತಿಸುವವರೆಗೆ, ಆಪ್ ದೆಹಲಿ ಶಾಸಕರಾದ ಜರ್ನೈಲ್ ಅವರನ್ನು ನೇಮಿಸುವುದರಿಂದ ಹಿಡಿದು ಪ್ರಚಾರದ ಪ್ರತಿಯೊಂದು ಅಂಶಗಳ ಮೇಲೆ ಎಎಪಿ ಮುಖ್ಯಸ್ಥರು ತಮ್ಮ ಚಾಣಾಕ್ಷತೆ ತೋರಿಸಿದ್ದರು.

ಪಂಜಾಬ್ ಸಹ-ಪ್ರಭಾರಿಯಾಗಿ ಸಿಂಗ್ ಮತ್ತು ರಾಘವ್ ಚಡ್ಡಾ ಅವರು ಪ್ರಮುಖ ಕೆಲಸ ಮಾಡಿದ್ದಾರೆ. ವ್ಯಾಪಕವಾದ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಸಂಶೋಧನೆಯನ್ನು ನಡೆಸಿ ಪಕ್ಷ ಈ ಮಟ್ಟಕ್ಕೆ ಯಶ ಕಾಣಲು ಕಾರಣರಾಗಿದ್ದಾರೆ ಎಂದೂ ಸಹ ಹೇಳಬಹುದು.

ಎಚ್ಚೆತ್ತುಕೊಂಡ ಆಪ್​:ಚರಣ್‌ಜೀತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಿದ ನಂತರದ ದಿನಗಳಲ್ಲಿ ಪಕ್ಷ ಮತ್ತಷ್ಟು ಎಚ್ಚೆತ್ತುಕೊಂಡಿತು. ಇದಾದ ನಂತರ ಕೇಜ್ರಿವಾಲ್ ಮತ್ತು ಚನ್ನಿ ನಡುವೆ ಜಗಳ ಆರಂಭವಾದವು. ಎಎಪಿ ತನ್ನ ತಪ್ಪಿನಿಂದ 2017 ರಲ್ಲಿ ಕಲಿತ ಪಾಠವನ್ನು ಮರೆತಿರಲಿಲ್ಲ. ಹೀಗಾಗಿ ಅತ್ಯಂತ ಜನಪ್ರಿಯ ರಾಜಕೀಯ ವಿಡಂಬನಕಾರ ಭಗವಂತ್ ಮಾನ್‌ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ಮೂಲಕ 2017 ರಲ್ಲಿ ಎಎಪಿಯಿಂದ ದೂರ ಉಳಿದಿದ್ದ ಹಿಂದೂಗಳ ಬೆಂಬಲವನ್ನು ಗಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿತು.

ಪ್ರಣಾಳಿಕೆಯಲ್ಲೂ ಚಾಣಾಕ್ಷತನ:ದೆಹಲಿಯಂತೆಯೇ ಪಂಜಾಬ್​ನಲ್ಲೂ ಸಹ ದೆಹಲಿ ಮಾದರಿ ಸರ್ಕಾರ ರಚನೆ ಮಾಡುತ್ತೇವೆ ಎಂದು ವಿಶೇಷವಾಗಿ ಯುವಕರು, ಮಹಿಳೆಯರು ಮತ್ತು ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಇದು ಬಹು ಸಂಖ್ಯಾತರನ್ನು ಆಪ್​ನತ್ತ ಸೆಳೆಯುವಲ್ಲಿ ಕೆಲಸ ಮಾಡಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.

ಆಪ್​ 2014 ರಿಂದ ಪಂಜಾಬ್‌ನ ಜನರ ಬೆಂಬಲವನ್ನು ಪಡೆದಿದೆ. ಅದು ತನ್ನ ಚೊಚ್ಚಲ ಲೋಕಸಭೆ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಆಪ್​ ಅಲ್ಲಿ ಭದ್ರ ಬುನಾದಿ ಹಾಕಿಕೊಂಡಿತ್ತು. ಇದಾದ ನಂತರ 2022 ರಲ್ಲಿ ಮನ್ ರಾಜಕೀಯ ಅಭಿಯಾನಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬಿದರು.

"ಇದು ಭಗವಂತ್ ಮಾನ್ ಮತ್ತು ಅರವಿಂದ್ ಕೇಜ್ರಿವಾಲ್ ಜೋಡಿಯ ಗೆಲುವು" ಎಂದು ಎಎಪಿಯ ಪಂಜಾಬ್ ಸಹ ಉಸ್ತುವಾರಿ ರಾಘವ್ ಚಡ್ಡಾ ಅವರು ಹೊಗಳಿದ್ದಾರೆ. ಇದು ನಿಜವೂ ಹೌದು. ಸಾಂಪ್ರದಾಯಿಕ ಪಕ್ಷಗಳು ಆಕ್ರಮಿಸಿಕೊಂಡಿರುವ ಸ್ಥಳಗಳ ಮೇಲೆ ಇವರ ಬಾವುಟ ನೆಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರು ಈ ಯಥಾಸ್ಥಿತಿಯನ್ನು ಮುರಿದಿದ್ದು ಇವರ ಅದ್ಭುತ ಸಾಧನೆಯಾಗಿದೆ ಎಂದು ಹಿರಿಯ ಪತ್ರಕರ್ತೆ ನೀರ್ಜಾ ಚೌಧರಿ ಆಪ್ ಪಂಜಾಬ್ ಗೆಲುವಿನ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಕೇಜ್ರಿವಾಲ್​ ಪಕ್ಷವೇ ಮೊದಲೇನಲ್ಲ:ಒಂದು ಪಕ್ಷವು ತನ್ನ ಸ್ವಂತ ರಾಜ್ಯವನ್ನು ಮೀರಿ ತನ್ನ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಪಕ್ಷಗಳು ಈ ಹಿಂದೆಯೂ ಆ ಪ್ರಯತ್ನವನ್ನು ಮಾಡಿವೆ. ಬಿಎಸ್ಪಿ ಹಲವು ರಾಜ್ಯಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದೆ. ಆದರೆ ಅದು ಯಶಸ್ವಿಯಾಗಲಿಲ್ಲ. ಮಹಾರಾಷ್ಟ್ರ, ಬಿಹಾರ ಮತ್ತು ಇತರ ಹಲವು ರಾಜ್ಯಗಳಲ್ಲಿ ಎಸ್‌ಪಿ ಕೂಡ ಚುನಾವಣೆಗೆ ಸ್ಪರ್ಧಿಸಿದೆ. ಅದೂ ಸಹ ಯಶಸ್ವಿಯಾಗಲಿಲ್ಲ. ಶಿವಸೇನೆ ಹಲವು ರಾಜ್ಯಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದೆ. ಅದೂ ಸಹ ಬೇರೆಡೆ ಮಕಾಡೆ ಮಲಗಿದೆ. ಆದರೆ ಆಪ್​ ಮಾತ್ರ ಭಿನ್ನವಾಗಿದ್ದು, ತನ್ನ ವ್ಯಾಪ್ತಿಯನ್ನು ಮತ್ತೊಂದು ರಾಜ್ಯಕ್ಕೆ ವಿಸ್ತರಿಸಿದೆ.

ಪಂಜಾಬ್‌ನಲ್ಲಿ ಎಎಪಿಯ ಯಶಸ್ಸು ಇತರ ಪ್ರಾದೇಶಿಕ ಪಕ್ಷಗಳಿಗೆ ತಾವೂ ಗೆಲ್ಲಬಹುದೆಂಬ ಭರವಸೆಯನ್ನು ನೀಡಬಹುದಾದರೂ, ಕಳೆದ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಎಎಪಿ ಈಗಾಗಲೇ ಇದ್ದುದರಿಂದ ಇವರ ಪರಿಸ್ಥಿತಿ ವಿಭಿನ್ನವಾಗಿತ್ತು ಎನ್ನುತ್ತಾರೆ ರಾಜಕೀಯ ನಿಪುಣರು.

ಎಎಪಿ ರಾಷ್ಟ್ರೀಯ ವೇದಿಕೆಗೆ ಬಂದದ್ದು ನಿಜಕ್ಕೂ ರಾಜಕೀಯದಲ್ಲಿ ಅಪರೂಪದ ಕ್ಷಣವಾಗಿದೆ. ಆದಾಗ್ಯೂ, ದೊಡ್ಡ ಚಿತ್ರಣವೇನು ತಕ್ಷಣಕ್ಕೆ ಬದಲಾಗುವುದಿಲ್ಲ. ಎಎಪಿ ತನ್ನ ರಾಜಕೀಯ ಸ್ಥಾನವನ್ನು ಬಲಪಡಿಸಿಕೊಂಡ ನಂತರ ಐದು ಅಥವಾ ಏಳು ವರ್ಷಗಳ ನಂತರವೇ ದೊಡ್ಡ ಚಿತ್ರಣ ಬದಲಾಗುತ್ತದೆ ಎಂದು ಭಾವಿಸಬಹುದು. ಈ ಸಮಯದಲ್ಲಿ, ಇದು ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಹೊರಹೊಮ್ಮುತ್ತಿದೆ ಎಂಬ ಸಂಕೇತವಾಗಿದೆ ಎಂಬುದನ್ನು ಗಮನಿಸಬಹುದು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಎಪಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜಕೀಯ ಪಕ್ಷವಾಗಿದೆ ಎಂದು ಪ್ರತಿಪಾದಿಸಿರುವ ರಾಘವ್ ಚಡ್ಡಾ ಇದು ಕಾಂಗ್ರೆಸ್‌ಗೆ ನೈಸರ್ಗಿಕ ಮತ್ತು ರಾಷ್ಟ್ರೀಯ ಬದಲಿ ಮಾರ್ಗ ಎಂದು ಹೇಳಿದ್ದಾರೆ. 1885 ಪೂರ್ವ-ಸ್ವತಂತ್ರ ಭಾರತದಲ್ಲಿ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ಗೆ 10 ವರ್ಷಗಳ ಹಿಂದೆ ನವೆಂಬರ್ 2012 ರಲ್ಲಿ ಸ್ಥಾಪಿಸಲಾದ ಭಾರತದ ಹೊಸ ರಾಜಕೀಯ ಪಕ್ಷ ಆಪ್​ ಭಾರಿ ನಷ್ಟವನ್ನು ಉಂಟು ಮಾಡಿದೆ ಎಂದು ಹೇಳಬಹುದು. ಅದರಲ್ಲೂ ಪ್ರಮುಖವಾಗಿ ಪಂಜಾಬ್‌ನಲ್ಲಿ ಆಪ್​ ಗರಿಷ್ಠ ಅಲ್ಲಿನ ಹಳೇ ಪಕ್ಷಗಳಿಗೆ ಕೊಡಲಿ ಏಟನ್ನೇ ನೀಡಿದೆ.

ಆಪ್​ನ ಮುಂದಿನ ನಡೆ ಏನು?ಪಂಜಾಬ್‌ನಲ್ಲಿ ಎಎಪಿಯ ಫಲಿತಾಂಶಗಳು ಅಸಾಧಾರಣವಾಗಿದ್ದರೂ, ಗೋವಾ, ಉತ್ತರಾಖಂಡ ಅಥವಾ ಉತ್ತರ ಪ್ರದೇಶದಲ್ಲಿ ಪಕ್ಷವು ಗಮನಾರ್ಹವಾಗಿ ಕಾರ್ಯನಿರ್ವಹಿಸಿಲ್ಲ. ಪರಿಣಾಮ ಮುಂದೆ ಶೀಘ್ರದಲ್ಲೇ ಆಪ್​ ಏಣಿ ಏರುವ ಕೆಲಸಕ್ಕೆ ಮುಂದಾಗಿದೆ. ಪ್ರಮುಖವಾಗಿ ಸಿಂಹದ ಗುಹೆಗೆ ನುಗ್ಗುವ ಸಾಹಸವನ್ನು ಆಪ್​ ಮಾಡುತ್ತಿದೆ. ಈ ಮೂಲಕ ದೇಶದ ಪ್ರಧಾನಿಯ ಭದ್ರಕೋಟೆಯಾದ ಗುಜರಾತ್​ಗೆ ಪೊರಕೆ ಎಂಟ್ರಿ ಕೊಟ್ಟು ಹೇಗೆ ಸೆಟೆದು ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.

Last Updated : Mar 10, 2022, 5:32 PM IST

ABOUT THE AUTHOR

...view details