ಕರ್ನಾಟಕ

karnataka

ETV Bharat / bharat

ಆಪ್​ಗೆ ರಾಷ್ಟ್ರೀಯ ಪಕ್ಷದ ಗರಿ: ದೀದಿಯ ಟಿಎಂಸಿ, ಪವಾರ್​ರ ಎನ್​ಸಿಪಿಗೆ ಸ್ಥಾನ ಖೋತಾ ಶಾಕ್

ರಾಷ್ಟ್ರೀಯ ಪಕ್ಷಗಳ ನಿಯಮಗಳಡಿ ಪರಿಷ್ಕರಣೆ ಮಾಡಲಾಗಿದ್ದು, ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಶರದ್​ ಪವಾರ್​ರ ಎನ್​ಸಿಪಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕಳೆದುಕೊಂಡಿವೆ. ಸಿಎಂ ಅರವಿಂದ್​ ಕೇಜ್ರಿವಾಲ್​ರ ಆಪ್​ ಹೊಸ ರಾಷ್ಟ್ರೀಯ ಪಕ್ಷವಾಗಿ ಉದಯಿಸಿದೆ.

ಆಪ್​ಗೆ ರಾಷ್ಟ್ರೀಯ ಪಕ್ಷದ ಗರಿ
ಆಪ್​ಗೆ ರಾಷ್ಟ್ರೀಯ ಪಕ್ಷದ ಗರಿ

By

Published : Apr 11, 2023, 10:44 AM IST

ನವದೆಹಲಿ:ಕೇಂದ್ರ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಸ್ಥಾನಮಾನವನ್ನು ಪರಿಷ್ಕರಿಸಿದ್ದು, ತೃಣಮೂಲ ಕಾಂಗ್ರೆಸ್‌(ಟಿಎಂಸಿ) ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಮತ್ತು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಸಿಪಿಐ) ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿವೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆದುಕೊಂಡಿದೆ. ಎಎಪಿ ಪ್ರಸ್ತುತ ದೆಹಲಿ ಮತ್ತು ಪಂಜಾಬ್​ನಲ್ಲಿ ಅಧಿಕಾರಲ್ಲಿದೆ.

ಚುನಾವಣಾ ಆಯೋಗ ಸೋಮವಾರ ನೀಡಿದ ಮಾಹಿತಿಯಂತೆ, ಉತ್ತರ ಪ್ರದೇಶದ ಆರ್‌ಎಲ್‌ಡಿ, ಆಂಧ್ರಪ್ರದೇಶದ ಬಿಆರ್‌ಎಸ್, ಮಣಿಪುರದಲ್ಲಿ ಪಿಡಿಎ, ಪುದುಚೇರಿಯ ಪಿಎಂಕೆ, ಪಶ್ಚಿಮ ಬಂಗಾಳದ ಆರ್‌ಎಸ್‌ಪಿ ಮತ್ತು ಮಿಜೋರಾಂನ ಎಂಪಿಸಿಗೆ ನೀಡಿದ್ದ ರಾಜ್ಯ ಪಕ್ಷದ ಸ್ಥಾನಮಾನವನ್ನು ರದ್ದುಗೊಳಿಸಿದೆ.

ವ್ಯಾಪಿಸುತ್ತಿರುವ ಆಪ್​:ದೆಹಲಿ, ಪಂಜಾಬ್​ನಲ್ಲಿ ಬಹುಮತ ಪಡೆದು ಅಧಿಕಾರ ನಡೆಸುತ್ತಿರುವ ಆಪ್​, ಗೋವಾ ಮತ್ತು ಗುಜರಾತ್ ರಾಜ್ಯಗಳ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಗಿಟ್ಟಿಸಿಕೊಂಡಿದೆ. ರಾಷ್ಟ್ರೀಯ ಪಕ್ಷವಾಗಲು ಇರುವ ನಿಯಮಗಳನ್ನು ಆಪ್​ ಹೊಂದಿದೆ ಎಂದು ಆಯೋಗ ಹೇಳಿದೆ.

ಇತ್ತ, ತಮ್ಮ ಪಕ್ಷ ರಾಷ್ಟ್ರಿಯ ಸ್ಥಾನಮಾನ ಪಡೆದ ಬಳಿಕ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಆಗಿರುವ ಅರವಿಂದ್ ಕೇಜ್ರಿವಾಲ್ ಅವರು, ಪಕ್ಷಕ್ಕೆ ಇಷ್ಟು ಕಡಿಮೆ ಅವಧಿಯಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಕ್ಕಿರುವುದು ಪವಾಡವೇ ಸರಿ. ಪಕ್ಷಕ್ಕೆ ಜನರು ನೀಡಿದ ಮನ್ನಣೆ, ಅವರ ನಿರೀಕ್ಷೆಗಳನ್ನು ಪೂರೈಸಲು ಪಕ್ಷದ ವಹಿಸಿದ ಶ್ರಮದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕೇಜ್ರಿವಾಲ್​, " ಅಲ್ಪ ಸಮಯದಲ್ಲಿ ದೊಡ್ಡ ಸಾಧನೆ ಮಾಡಲಾಗಿದೆ. ಇದು ಪವಾಡಕ್ಕಿಂತ ಕಡಿಮೆ ಏನಲ್ಲ. ಎಲ್ಲರಿಗೂ ಅಭಿನಂದನೆಗಳು. ದೇಶದ ಕೋಟ್ಯಂತರ ಜನರು ನಮ್ಮನ್ನು ಇಲ್ಲಿವರೆಗೂ ಕರೆತಂದಿದ್ದಾರೆ. ಅವರಿಗೆ ನಮ್ಮ ಮೇಲೆ ಬಹಳಷ್ಟು ನಿರೀಕ್ಷೆಯಿದೆ. ಜನರು ನಮಗೆ ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅದನ್ನು ಉತ್ತಮವಾಗಿ ನಿರ್ವಹಿಸಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರು ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಜೊತೆಗೂಡಿ ನಿರಶನ ನಡೆಸಿದ್ದರು. ಇದಾದ ಬಳಿಕ ರಾಜಕೀಯಕ್ಕೆ ಕಾಲಿಟ್ಟ ಅವರು 12 ವರ್ಷಗಳ ಹಿಂದೆ ಅಂದರೆ 2012 ರಲ್ಲಿ ಆಪ್​ ಆರಂಭಿಸಿದರು. 2013 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಕಾಂಗ್ರೆಸ್​ನ ಶೀಲಾ ದೀಕ್ಷಿತ್ ಅವರನ್ನು ಕಣದಲ್ಲಿ ಸೋಲಿಸಿದ್ದರು.

ಇದಲ್ಲದೇ, ಎನ್‌ಸಿಪಿ, ಸಿಪಿಐ ಮತ್ತು ತೃಣಮೂಲ ಕಾಂಗ್ರೆಸ್‌ಗೆ ರಾಷ್ಟ್ರೀಯ ಪಕ್ಷಗಳ ಸ್ಥಾನಮಾನ ಖೋತಾ ಆಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಬಿಜೆಪಿ, ಕಾಂಗ್ರೆಸ್, ಸಿಪಿಐ(ಎಂ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮತ್ತು ಎಎಪಿ ಈಗ ರಾಷ್ಟ್ರೀಯ ಪಕ್ಷಗಳಾಗಿವೆ. ನಾಗಾಲ್ಯಾಂಡ್ ಮತ್ತು ಮೇಘಾಲಯ ಚುನಾವಣೆಯಲ್ಲಿ ಎನ್‌ಸಿಪಿ ಮತ್ತು ಟಿಎಂಸಿ ಪಕ್ಷಗಳು ಕಳಪೆ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಸ್ಥಾನ ಕಳೆದುಕೊಂಡಿವೆ ಎಂದು ಆಯೋಗ ಹೇಳಿದೆ.

ನಾಗಾಲ್ಯಾಂಡ್‌ನಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಮೇಘಾಲಯದಲ್ಲಿ ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ ಮತ್ತು ತ್ರಿಪುರಾದಲ್ಲಿ ತಿಪ್ರಾ ಮೋಥಾಗೆ "ಮಾನ್ಯತೆ ಪಡೆದ ರಾಜ್ಯ ರಾಜಕೀಯ ಪಕ್ಷ" ಸ್ಥಾನಮಾನವನ್ನು ನೀಡಲಾಗಿದೆ. ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಮುಂಚೆ ಮತ್ತು 2024 ರ ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕಿಂತ ಮುಂಚೆಯೇ ಈ ಬದಲಾವಣೆಯಾಗಿದೆ.

ಓದಿ:ಇಂದು ಅಥವಾ ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ

ABOUT THE AUTHOR

...view details