ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಬುಧವಾರ ಮತ್ತೊಂದು ಅವಧಿಗೆ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಮೇಯರ್ ಅಭ್ಯರ್ಥಿಯಾಗಿದ್ದ ಶಿಖಾ ರಾಯ್ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಜೊತೆಗೆ ಉಪ ಮೇಯರ್ ಬಿಜೆಪಿ ಅಭ್ಯರ್ಥಿ ಸೋನಿ ಪಾಲ್ ಕೂಡ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ. ಇದರಿಂದ ಆಪ್ನ ಆಲೆ ಮೊಹಮ್ಮದ್ ಇಕ್ಬಾಲ್ ಉಪ ಮೇಯರ್ ಆಗಿ ಆಯ್ಕೆಗೊಂಡಿದ್ದಾರೆ.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ)ನಲ್ಲಿ ಆಮ್ ಆದ್ಮಿ ಪಕ್ಷ ಆಡಳಿತ ಪಕ್ಷವಾಗಿದ್ದು, 132 ಕಾರ್ಪೊರೇಟರ್‌ಗಳನ್ನು ಹೊಂದಿದೆ. ಮತ್ತೊಂದೆಡೆ, ಬಿಜೆಪಿ 106 ಕಾರ್ಪೊರೇಟರ್‌ಗಳನ್ನು ಹೊಂದಿದ್ದರೆ, ಕಾಂಗ್ರೆಸ್ನ 9 ಕಾರ್ಪೊರೇಟರ್‌ಗಳು ಹಾಗೂ ಮೂವರು ಸ್ವತಂತ್ರ ಕಾರ್ಪೊರೇಟರ್‌ಗಳು ಇದ್ದಾರೆ.
ಇದನ್ನೂ ಓದಿ:ಕೇರಳದಲ್ಲಿ ನಿನ್ನೆ ಮೋದಿ ಚಾಲನೆ ನೀಡಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೋರಿಕೆ: ವಿಡಿಯೋ
ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಮತ್ತು ದೆಹಲಿಯ ನಾಮನಿರ್ದೇಶಿತ ಶಾಸಕರು ಸೇರಿದಂತೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯ ಒಟ್ಟು 274 ಮತಗಳ ಪೈಕಿ 147 ಮತಗಳು ಆಮ್ ಆದ್ಮಿ ಪಕ್ಷದ ಪರವಾಗಿದ್ದರೆ, ಬಿಜೆಪಿ 116 ಮತಗಳನ್ನು ಹೊಂದಿದೆ. ಈ ಹಿಂದೆ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕನ್ನು ನೀಡುವುದರ ಕುರಿತ ವಿವಾದ ಉಂಟಾಗಿತ್ತು. ಇದರ ನಡುವೆ ಮೂರು ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಸ್ಥಗಿತವಾಗಿತ್ತು. ಕೊನೆಗೆ ನಾಲ್ಕನೇ ಪ್ರಯತ್ನದಲ್ಲಿ ಫೆಬ್ರವರಿ 22ರಂದು ಶೆಲ್ಲಿ ಒಬೆರಾಯ್ ಮೊದಲ ಬಾರಿಗೆ ದೆಹಲಿ ಮೇಯರ್ ಆಗಿ ಆಯ್ಕೆಯಾಗಿದ್ದರು. ಉಪ ಮೇಯರ್ ಆಗಿ ಇಕ್ಬಾಲ್ ನೇಮಕವಾಗಿದ್ದರು.
ಆರ್ಥಿಕ ವರ್ಷಕ್ಕೆ ಹೊಸ ಮೇಯರ್:ರಾಷ್ಟ್ರ ರಾಜಧಾನಿಯಲ್ಲಿನ ಮೇಯರ್ ಮತ್ತು ಉಪ ಮೇಯರ್ ಹುದ್ದೆಯ ಐದು ವರ್ಷದ ಅವಧಿಯಲ್ಲಿ ಪ್ರತಿ ಆರ್ಥಿಕ ವರ್ಷದ ಅಂತ್ಯದ ನಂತರ ಮೀಸಲಾತಿ ಬದಲಾಗುತ್ತದೆ. ಮೊದಲ ವರ್ಷ ಮಹಿಳೆಯರಿಗೆ ಮೀಸಲಾಗಿತ್ತು. ಎರಡನೇ ವರ್ಷ ಸಾಮಾನ್ಯ ವರ್ಗ ಮತ್ತು ಮೂರನೇ ವರ್ಷ ಮೀಸಲು ವರ್ಗಕ್ಕೆ ಮತ್ತು ಉಳಿದ ಎರಡು ವರ್ಷ ಸಾಮಾನ್ಯ ವರ್ಗಕ್ಕೆ ಮೇಯರ್ ಮತ್ತು ಉಪ ಮೇಯರ್ ಹುದ್ದೆ ಮೀಸಲಾಗಿದೆ.
ಎರಡನೇ ವರ್ಷದ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಆಪ್ನ ಶೆಲ್ಲಿ ಒಬೆರಾಯ್ ಮತ್ತು ಬಿಜೆಪಿಯ ಶಿಖಾ ರಾಯ್ ನೇರ ಪೈಪೋಟಿ ಏರ್ಪಟ್ಟಿತ್ತು. ಸ್ಥಾಯಿ ಸಮಿತಿಗೆ ಚುನಾವಣೆ ನಡೆಯದ ಕಾರಣ ತಮ್ಮ ನಾಮಪತ್ರವನ್ನು ಹಿಂಪಡೆದಿರುವುದಾಗಿ ಶಿಖಾ ರಾಯ್ ಸದನಕ್ಕೆ ತಿಳಿಸಿದರು. ಹೀಗಾಗಿ ಯಾವುದೇ ಎದುರಾಳಿ ಇಲ್ಲದೇ ಮೇಯರ್ ಆಗಿ ಶೆಲ್ಲಿ ಒಬೆರಾಯ್ ಆಯ್ಕೆಯಾದರು. ಅದೇ ರೀತಿಯಾಗಿ ಬಿಜೆಪಿ ಅಭ್ಯರ್ಥಿ ಸೋನಿ ಪಾಲ್ ಸಹ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರಿಂದ ಹಾಲಿ ಉಪಮೇಯರ್ ಆಲೆ ಮೊಹಮ್ಮದ್ ಇಕ್ಬಾಲ್ ಅವರು ಮತ್ತೊಂದು ಅವಧಿ ಆಯ್ಕೆಯಾದರು.
ಇದನ್ನೂ ಓದಿ:ದೆಹಲಿ ಪಾಲಿಕೆಯಲ್ಲಿ ಭಾರಿ ಕೋಲಾಹಲ: ಬಿಜೆಪಿ - ಆಪ್ ಸದಸ್ಯರಿಂದ ರಣಾಂಗಣವೇ ಸೃಷ್ಟಿ