ನವದೆಹಲಿ:ನಿರೀಕ್ಷೆಯಂತೆ ದಿಲ್ಲಿ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮೇಯರ್ ಗಾದಿಗೆ ಏರಿದೆ. ಪಕ್ಷದ ನಾಯಕ ಶೆಲ್ಲಿ ಒಬೆರಾಯ್ ನೂತನ ಮೇಯರ್ ಆಗಿ ಚುನಾಯಿತರಾದರು. ಚುನಾವಣೆ ನಡೆದು 3 ತಿಂಗಳಾದರೂ ಮೇಯರ್ ಆಯ್ಕೆ ನಡೆದಿರಲಿಲ್ಲ. ಈ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮೇಯರ್ ಚುನಾವಣೆಗೆ ಗಡುವು ವಿಧಿಸಿತ್ತು. ಅದರಂತೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇಂದು ಚುನಾವಣೆಯ ದಿನ ನಿಗದಿ ಮಾಡಿದ್ದರು. ಇದರಲ್ಲಿ ಹೆಚ್ಚಿನ ಬಹುಮತ ಹೊಂದಿರುವ ಆಪ್ ಪಕ್ಷ ಮೇಯರ್ ಸ್ಥಾನವನ್ನು ಪಡೆದುಕೊಂಡಿತು. ಪಾಲಿಕೆ ಕಚೇರಿಯಲ್ಲಿ ಆಪ್ ಸದಸ್ಯರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ದೆಹಲಿ ಜನರ ಕನಸುಗಳನ್ನು ಈಡೇರಿಸಲು ಶ್ರಮಿಸುತ್ತೇನೆ:ಫಲಿತಾಂಶಗಳು ಪ್ರಕಟವಾದ ನಂತರ, ಒಬೆರಾಯ್, ಬಿಜೆಪಿಯ ಸತ್ಯ ಶರ್ಮಾ ಅವರಿಂದ ಅಧಿಕಾರ ವಹಿಸಿಕೊಂಡರು. ಮೇಯರ್ ಆಗಿ ಆಯ್ಕೆ ಆದ ಬಳಿಕ ಮೊದಲ ಬಾರಿಗೆ ಮಹಾನಗರ ಪಾಲಿಕೆ ಉದ್ದೇಶಿಸಿ ಮಾತನಾಡಿದ ಒಬೆರಾಯ್, ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಧನ್ಯವಾದ ಅರ್ಪಿಸಿದರು. ಇದೇ ವೇಳೆ ದೆಹಲಿ ಮಹಾನಗರ ಪಾಲಿಕೆ ಕಾಯ್ದೆಯ ನಿಯಮಗಳನ್ನು ಅನುಸರಿಸುತ್ತೇನೆ ಮತ್ತು ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಎಂಸಿಡಿಯನ್ನು ಮುನ್ನೆಡೆಸುತ್ತೇನೆ ಎಂದು ಶೆಲ್ಲಿ ಜನರಿಗೆ ಭರವಸೆ ನೀಡಿದರು. "ದೆಹಲಿಯ ಜನರ ಕನಸುಗಳನ್ನು ಈಡೇರಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ" ಎಂದು ಅವರು ಇದೇ ವೇಳೆ ಅಭಯ ನೀಡಿದರು.
ಬೆಳಗ್ಗೆಯಿಂದ ಏನೇನು ನಡೆಯಿತು:ಬೆಳಗ್ಗೆ 11 ಗಂಟೆಯಿಂದಲೇ ನವದೆಹಲಿ ಮಹಾನಗರ ಪಾಲಿಕೆಗೆ ಸದಸ್ಯರು ಆಗಮಿಸಿದ್ದರು. ಮತ್ತು ಮತದಾನ ಪ್ರಕ್ರಿಯೆ ಕೂಡಾ ಆರಂಭವಾಗಿತ್ತು. ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡಿದ್ದ ಸತ್ಯ ಶರ್ಮಾ ಸರಿಯಾಗಿ 11.26ಕ್ಕೆ ಪಾಲಿಕೆ ಕಚೇರಿಗೆ ಆಗಮಿಸಿ, ಮತದಾನದ ಪ್ರಕಿಯೆ ಆರಂಭಿಸಿದರು. ಬಳಿಕ ಮೇಯರ್ ಚುನಾವಣೆಗೆ ನಾಮನಿರ್ದೇಶನಗೊಂಡ ಎಲ್ಲ ಕೌನ್ಸಿಲರ್‌ಗಳು, ಸಂಸದರು ಮತ್ತು ಶಾಸಕರ ಸಮ್ಮುಖದಲ್ಲಿ ಮತದಾನ ಪ್ರಕ್ರಿಯೆ ಶುರು ಮಾಡಲಾಯಿತು.
ಅಂತಿಮವಾಗಿ ಮಧ್ಯಾಹ್ನ 1.42ಕ್ಕೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು. ಮೇಯರ್ ಆಯ್ಕೆಗೆ ಒಟ್ಟು 274 ಮತಗಳು ಇವೆ. ಇದರಲ್ಲಿ 250 ಚುನಾಯಿತ ಕಾರ್ಪೊರೇಟರ್‌ಗಳು, ದೆಹಲಿಯ ಏಳು ಲೋಕಸಭಾ ಸದಸ್ಯರು, ಮೂವರು ರಾಜ್ಯಸಭಾ ಸದಸ್ಯರು ಮತ್ತು 14 ಶಾಸಕರ ಮತಗಳು ಮೇಯರ್ ಆಯ್ಕೆಯಲ್ಲಿ ಭಾಗವಹಿಸಬಹುದಾಗಿತ್ತು. ದೆಹಲಿ ವಿಧಾನಸಭಾ ಸ್ಪೀಕರ್ ಅವರು ಆಮ್ ಆದ್ಮಿ ಪಕ್ಷದ 13 ಶಾಸಕರನ್ನು ಮತ್ತು ಬಿಜೆಪಿಯಿಂದ ಒಬ್ಬರನ್ನು ಕಾರ್ಪೊರೇಷನ್ ಹೌಸ್‌ನಲ್ಲಿ ಮತ ಚಲಾಯಿಸಲು ನಾಮನಿರ್ದೇಶನ ಮಾಡಿದ್ದರು. ಆಮ್ ಆದ್ಮಿ ಪಕ್ಷ 150 ಮತಗಳನ್ನು ಹೊಂದಿದ್ದರೆ ಬಿಜೆಪಿ 113 ಮತಗಳನ್ನು ಹೊಂದಿತ್ತು.
ಅಂತಿಮವಾಗಿ ಗೆಲುವು ಸಾಧಿಸಿದ ಆಮ್ ಆದ್ಮಿ:13 ಆಮ್ ಆದ್ಮಿ ಪಕ್ಷದ ಶಾಸಕರು ಮತ್ತು ಒಬ್ಬ ಬಿಜೆಪಿ ಶಾಸಕ, ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವರು ಮೇಯರ್ ಚುನಾವಣೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು. ಬಳಿಕ ಕಾರ್ಪೊರೇಟರ್‌ಗಳ ಮತ ಚಲಾವಣೆ ಮಾಡಿದರು. ಸಭಾಧ್ಯಕ್ಷರು ಪಾಲಿಕೆ ಕಾರ್ಯದರ್ಶಿ ಭಗವಾನ್ ಸಿಂಗ್ ಹಾಗೂ ಪಾಲಿಕೆ ಅಧಿಕಾರಿಗಳನ್ನು ಮತ ಎಣಿಕೆಗೆ ಕರೆಸಿ ಅವರ ಸಮ್ಮುಖದಲ್ಲಿ ಮತಪೆಟ್ಟಿಗೆ ತೆರೆದು ಮತ ಎಣಿಕೆ ನಡೆಸಲಾಯಿತು. ಅಂತಿಮವಾಗಿ 150 ಮತಗಳೊಂದಿಗೆ ಶೆಲ್ಲಿ ಒಬೆರಾಯ್ ಗೆಲುವು ಸಾಧಿಸಿದರು. ಇದೇ ವೇಳೆ ಬಿಜೆಪಿ 116 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಸಭಾಧ್ಯಕ್ಷರು ಒಬೆರಾಯ್ ಅವರ ಆಯ್ಕೆಯನ್ನು ಘೋಷಿಸಿದರು.