ನವದೆಹಲಿ: 2012 ರಲ್ಲಿ ದೇವರ ಇಚ್ಛೆಯಿಂದ ಆಮ್ ಆದ್ಮಿ ಪಕ್ಷ ಸ್ಥಾಪನೆಯಾಗಿದೆ ಎಂದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಶ್ರೀಕೃಷ್ಣ ಭಗವಾನ್ ಹೇಳಿದಂತೆ ದೊಡ್ಡ ರಾಕ್ಷಸಗಳಾಗಿರುವ ಭ್ರಷ್ಟಾಚಾರ, ಹಣದುಬ್ಬರ ಮತ್ತು ನಿರುದ್ಯೋಗಗಳನ್ನು ಸಂಹರಿಸುತ್ತಿದೆ ಎಂದು ಬಣ್ಣಿಸಿದ್ದಾರೆ.
ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಕ್ಷದ ಪ್ರಥಮ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಕೇಜ್ರಿವಾಲ್, 1949 ರಲ್ಲಿ ಸಂವಿಧಾನ ಸಭೆಯು ಭಾರತದ ಸಂವಿಧಾನ ಅಂಗೀಕರಿಸಿ 63ನೇ ವರ್ಷಾಚರಣೆಯಂದು ಅಂದರೆ 26 ನವೆಂಬರ್ 2012 ರಂದು ಆಪ್ ಸ್ಥಾಪನೆಯಾಗಿದ್ದು ಕೇವಲ ಕಾಕತಾಳೀಯವಲ್ಲ ಎಂದರು.
ಸಂವಿಧಾನದ ಸ್ವಾತಂತ್ರ್ಯಹರಣದ ಎಲ್ಲ ಪ್ರಯತ್ನಗಳೂ ನಡೆದಿದ್ದವು. ಆಗ ದೇವರು ಮಧ್ಯಪ್ರವೇಶಿಸಬೇಕಾಯಿತು ಮತ್ತು ಸಂವಿಧಾನವನ್ನು ಉಳಿಸಲು ಸಂವಿಧಾನ ಸಭೆ ಅದನ್ನು ಅಂಗೀಕರಿಸಿ ಸರಿಯಾಗಿ 63 ವರ್ಷಗಳ ನಂತರ ನವೆಂಬರ್ 26, 2012 ರಂದು ಆಮ್ ಆದ್ಮಿ ಪಕ್ಷವನ್ನು (ಎಎಪಿ) ರಚಿಸಲಾಯಿತು ಕೇಜ್ರಿವಾಲ್ ಹೇಳಿದರು. ಆಪ್ ರಚನೆಯಾದ ಕೇವಲ 10 ವರ್ಷಗಳಲ್ಲಿ ಬೆಳೆದ ವೇಗದಲ್ಲಿ ಇನ್ನಾವ ಪಕ್ಷವೂ ಬೆಳೆದಿಲ್ಲ ಎಂದು ಅವರು ಹೇಳಿದರು.
ಕೇಜ್ರಿವಾಲ್ ತಮ್ಮ ಪಕ್ಷವನ್ನು ಶ್ರೀ ಕೃಷ್ಣನೊಂದಿಗೆ ಹೋಲಿಸಿದ್ದಕ್ಕಾಗಿ ಬಿಜೆಪಿ ಲೇವಡಿ ಮಾಡಿದೆ. ಎರಡು ರಾಜ್ಯಗಳಲ್ಲಿ ಪಕ್ಷವು ಚುನಾವಣೆಯಲ್ಲಿ ಗೆದ್ದ ನಂತರ ತನ್ನನ್ನು ತಾನು ದೇವರೆಂದು ಪರಿಗಣಿಸುತ್ತಿರುವ ಕೇಜ್ರಿವಾಲ್ ಸ್ವಯಂ ಹೊಗಳುಭಟ್ಟ ಮತ್ತು ಹೇಳಿಕೆ ಶೂರರಾಗಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಇದನ್ನು ಓದಿ:ಆಪರೇಷನ್ ಕಮಲ ಆರೋಪ: 22ಕ್ಕೆ ತುರ್ತು ಅಧಿವೇಶನ ಕರೆದ ಪಂಜಾಬ್ ಸಿಎಂ, ವಿಶ್ವಾಸಮತ ಯಾಚನೆ