ಗಾಂಧಿನಗರ, ಗುಜರಾತ್ :ಎಎಪಿ ಶಾಸಕ ಚೈತ್ರಾ ವಾಸವ ತಮ್ಮ ನೂರಾರು ಬೆಂಬಲಿಗರೊಂದಿಗೆ ದೇಡಿಯಾಪದ ಪೊಲೀಸ್ ಠಾಣೆಗೆ ಆಗಮಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಮತ್ತು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಒಂದು ತಿಂಗಳ ಹಿಂದೆ ದಾಖಲಾಗಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ಗುಜರಾತ್ ರಾಜ್ಯಾಧ್ಯಕ್ಷ ಇಸುದನ್ ಗಧ್ವಿ, ಆಮ್ ಆದ್ಮಿ ಪಕ್ಷದ ಶಾಸಕ ಹಾಗೂ ಜನಪ್ರಿಯ ಬುಡಕಟ್ಟು ನಾಯಕ ಚೈತ್ರಾ ವಾಸವ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ನಿನ್ನೆ ಅವರು ಸಾವಿರಾರು ಬೆಂಬಲಿಗರ ಸಮ್ಮುಖದಲ್ಲಿ ನರ್ಮದಾ ಪೊಲೀಸರ ಮುಂದೆ ಹಾಜರಾದರು. ಎಎಪಿ ನಾಯಕ ವಿರುದ್ಧ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.
"ವಾಸವ ಅವರು ಬೆಳಗ್ಗೆ ತಮ್ಮ ಪಕ್ಷದ ಕಚೇರಿಯಿಂದ ಮೆರವಣಿಗೆ ನಡೆಸಿ ನೂರಾರು ಬೆಂಬಲಿಗರೊಂದಿಗೆ ದೇಡಿಯಾಪದ ಪೊಲೀಸ್ ಠಾಣೆಗೆ ಆಗಮಿಸಿದರು. ಮೆರವಣಿಗೆಯ ಕೆಲ ವಿಡಿಯೋಗಳನ್ನು ಅವರ ಬೆಂಬಲಿಗರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಶಾಸಕರು ಶರಣಾದ ನಂತರ ಪೊಲೀಸರು ಔಪಚಾರಿಕವಾಗಿ ಬಂಧಿಸಿದ್ದರು. ಇವರೊಂದಿಗೆ ಇತರ ಮೂವರು ಆರೋಪಿಗಳು ಶರಣಾಗಿದ್ದಾರೆ" ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಘನಶ್ಯಾಮ್ ಸರ್ವಯ್ಯ ತಿಳಿಸಿದ್ದಾರೆ.