ಮುಂಬೈ (ಮಹಾರಾಷ್ಟ್ರ): ದೇಶವನ್ನೇ ಬೆಚ್ಚಿ ಬೀಳಿಸಿರುವ ಲಿವಿ-ಇನ್ ರಿಲೇಷನ್ಶಿಪ್ನಲ್ಲಿದ್ದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ಪಾತಕಿ ಅಫ್ತಾಬ್ ಪೂನಾವಾಲಾನನ್ನು ಗಲ್ಲಿಗೇರಿಸಬೇಕೆಂದು ಶ್ರದ್ಧಾ ತಂದೆ ವಿಕಾಸ್ ವಾಲ್ಕರ್ ಆಗ್ರಹಿಸಿದರು. ಇಂದು ಮುಂಬೈನಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ವಿಕಾಸ್ ವಾಲ್ಕರ್ ಭೇಟಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳನ್ನು ಕೊಲೆಗೈದಿರುವ ಅಫ್ತಾಬ್ ಪೂನಾವಾಲಾನಿಗೆ ಗರಿಷ್ಠ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಮನವಿ ಮಾಡಿದರು.
ಪೊಲೀಸರ ವಿರುದ್ಧವೂ ತನಿಖೆ ನಡೆಸಿ: 2020ರಲ್ಲಿ ಮಗಳು ನೀಡಿದ್ದ ದೂರಿನ ಬಗ್ಗೆ ಪೊಲೀಸರು ಅಂದೇ ತಕ್ಷಣದ ಕ್ರಮ ಕೈಗೊಂಡಿದರೆ, ಇಂದು ಆಕೆ ಜೀವಂತವಾಗಿರುತ್ತಿದ್ದಳು. ಶ್ರದ್ಧಾ ದೂರಿನ ಬಗ್ಗೆ ತನಿಖೆಗೆ ವಿಳಂಬ ಧೋರಣೆ ತೋರಿದ ಪಲ್ಘಾರ್ ಜಿಲ್ಲೆಯ ವಾಸೈ ಮತ್ತು ನಲಸೋಪಾರ ಮತ್ತು ತುಳಿಂಜ್ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧವೂ ತನಿಖೆಯಾಗಲಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಶ್ರದ್ಧಾ ಹತ್ಯೆ ಪ್ರಕರಣ: ಆರೋಪಿ ಅಫ್ತಾಬ್ ನ್ಯಾಯಾಂಗ ಬಂಧನ 14 ದಿನಗಳವರೆಗೆ ವಿಸ್ತರಿಸಿದ ಕೋರ್ಟ್
ಪ್ರಕರಣದಲ್ಲಿ ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸುವ ಬಗ್ಗೆ ದೆಹಲಿ ರಾಜ್ಯಪಾಲರು, ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ದೆಹಲಿ ದಕ್ಷಿಣ ವಿಭಾಗದ ಡಿಸಿಪಿ ಭರವಸೆ ನೀಡಿದ್ದಾರೆ ಎಂದು ವಿಕಾಸ್ ವಾಲ್ಕರ್ ತಿಳಿಸಿದರು.
ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ವಿವರ: ಶ್ರದ್ಧಾ ವಾಲ್ಕರ್ ಮತ್ತು ಆರೋಪಿ ಅಫ್ತಾಬ್ ಪೂನಾವಾಲಾ ಲಿವ್- ಇನ್ ರಿಲೇಷನ್ಶಿಪ್ನಲ್ಲಿದ್ದರು. ದಕ್ಷಿಣ ದೆಹಲಿಯಲ್ಲಿ ಇಬ್ಬರೂ ವಾಸವಾಗಿದ್ದರು. ಆದರೆ, ಇದೇ ವರ್ಷದ ಮೇನಲ್ಲಿ ಅಫ್ತಾಬ್ ಪೂನಾವಾಲಾ, ಶ್ರದ್ಧಾ ವಾಲ್ಕರ್ರನ್ನು ಕೊಂದು 35 ತುಂಡಗಳಾಗಿ ಕತ್ತರಿಸಿದ್ದ. ದೇಹದ ತಂಡುಗಳನ್ನು 300 ಲೀಟರ್ ಫ್ರಿಡ್ಜ್ನಲ್ಲಿ ಸುಮಾರು 3 ವಾರಗಳ ಕಾಲ ಇರಿಸಿದ್ದ. ಇದಾದ ನಂತರ ನಾನಾ ದೇಹದ ಭಾಗಗಳನ್ನು ಬೇರೆ ಬೇರೆ ಕಡೆಗಳಲ್ಲಿ ಅಫ್ತಾಬ್ ಎಸೆದಿದ್ದ ಎಂಬ ಆಘಾತಕಾರಿ ಮಾಹಿತಿ ಬಯಲಿಗೆ ಬಂದಿತ್ತು.
ಅಫ್ತಾಬ್ ಪೂನಾವಾಲಾನ ದುಷ್ಕೃತ್ಯ ಇಡೀ ದೇಶದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಅನೇಕ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಅಫ್ತಾಬ್ ಗಾಂಜಾ ವ್ಯಸನಿಯಾಗಿದ್ದ. ಅಲ್ಲದೇ, 2020ರಲ್ಲೇ ಹಲ್ಲೆ, ನಿಂದನೆ ಮತ್ತು ಕೊಲೆ ಮಾಡುವ ಬಗ್ಗೆ ಬೆದರಿಕೆ ಹಾಕುತ್ತಿದ್ದ ಆರೋಪಿಯ ವಿರುದ್ಧ ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ತುಳಿಂಜ್ ಪೊಲೀಸ್ ಠಾಣೆಗೆ ಶ್ರದ್ಧಾ ದೂರು ನೀಡಿದ್ದರು ಎಂದು ದಾಖಲೆಗಳಿಂದ ಬಯಲಾಗಿತ್ತು.
ಇದನ್ನೂ ಓದಿ:ಶ್ರದ್ಧಾ ಶವದ ಪಕ್ಕ ಕುಳಿತು ಗಾಂಜಾ ಸೇದಿದ್ದ ಅಫ್ತಾಬ್: ಮತ್ತೊಂದು ಬ್ಯಾಗ್ ಪತ್ತೆ, ಸ್ನೇಹಿತರ ಚಾಟಿಂಗ್ ಪರಿಶೀಲನೆ