ನವದೆಹಲಿ : ಮುಂದಿನ ಮೂರು ತಿಂಗಳ ಕಾಲ ಆನ್‌ಲೈನ್‌ನಲ್ಲಿ ತಮ್ಮ ಆಧಾರ್ ದಾಖಲೆಗಳನ್ನು ನಾಗರಿಕರು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಧಾರ್ ಕಾರ್ಡ್ ನಿರ್ವಹಿಸುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಸಂಸ್ಥೆ ಈ ಘೋಷಣೆ ಮಾಡಿದೆ. ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಮೈ ಆಧಾರ್ ಪೋರ್ಟಲ್‌ನಲ್ಲಿ ಉಚಿತ ಡಾಕ್ಯುಮೆಂಟ್ ಅಪ್‌ಡೇಟ್ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ಜನತೆಗೆ ತಿಳಿಸಲಾಗಿದೆ. ಉಚಿತ ಅಪ್ಡೇಟ್ ಸೌಲಭ್ಯವು ಮುಂದಿನ ಮೂರು ತಿಂಗಳವರೆಗೆ ಲಭ್ಯವಿದೆ. ಅಂದರೆ ಮಾರ್ಚ್ 15 ರಿಂದ ಜೂನ್ 14 ರವರೆಗೆ ಆಫರ್ ಇರಲಿದೆ. ಆದರೆ ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಇದು ಉಚಿತವಾಗಿರುತ್ತದೆ. ಭೌತಿಕ ಆಧಾರ್ ಕೇಂದ್ರಗಳಲ್ಲಿ ಅಪ್ಡೇಟ್ ಮಾಡಿಸುವಿರಾದರೆ ಈ ಹಿಂದಿನಂತೆ 50 ರೂಪಾಯಿ ಶುಲ್ಕ ಪಾವತಿಸಬೇಕು.
ತಮ್ಮ ಜನಸಂಖ್ಯಾ ವಿವರಗಳನ್ನು ಮರು ಮೌಲ್ಯೀಕರಿಸಲು ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ (PoI/PoA) ದಾಖಲೆಗಳನ್ನು ಅಪ್‌ಲೋಡ್ ಮಾಡುವಂತೆ UIDAI ನಾಗರಿಕರಿಗೆ ಮನವಿ ಮಾಡಿದೆ. ಅದರಲ್ಲೂ 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದು ಈವರೆಗೆ ಒಮ್ಮೆಯೂ ಅಪ್ಡೇಟ್ ಮಾಡಿಲ್ಲವಾದರೆ, ಅಂಥವರು ಈಗ ಉಚಿತವಾಗಿ ಅಪ್ಡೇಟ್ ಮಾಡಲು UIDAI ಅವಕಾಶ ನೀಡಿದೆ. ಆಧಾರ್ ಕಾರ್ಡ್ ಬಳಸುವಾಗ ಮತ್ತಷ್ಟು ಉತ್ತಮ ಸೌಕರ್ಯ ಪಡೆಯಲು ಇದರಿಂದ ಅನುಕೂಲವಾಗಲಿದೆ. ಜನಸಂಖ್ಯಾ ವಿವರಗಳು ಅಂದರೆ ವ್ಯಕ್ತಿಯ ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಇತ್ಯಾದಿ ಬದಲಾಯಿಸುವ ಅಗತ್ಯವಿದ್ದರೆ, ನಿವಾಸಿಗಳು ನಿಯಮಿತ ಆನ್‌ಲೈನ್ ಅಪ್ಡೇಟ್ ಸೇವೆಯನ್ನು ಬಳಸಬಹುದು ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬಹುದು. ಆಧಾರ್ ಕೇಂದ್ರಗಳಲ್ಲಾದರೆ ಸಾಮಾನ್ಯ ಶುಲ್ಕ ಅನ್ವಯಿಸುತ್ತವೆ.