ಡಾರ್ಜಿಲಿಂಗ್( ಪಶ್ಚಿಮಬಂಗಾಳ): ಯುವತಿಯೊಬ್ಬಳ ಮೇಲೆ ಆಕೆಯ ಪ್ರಿಯಕರನೇ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್ಬರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದ್ದು ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಯುವತಿ ಪ್ರಿಯಕರ ನಿತಿನ್ ಒನ್ರಾವ್ ಮತ್ತು ಆತನ ಸ್ನೇಹಿತ ಸುಮೇಶ್ ಸೌರಿಯಾನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ನಿನ್ನೆ ದಿನ ಆರೋಪಿ ನಿತಿನ್ ತನ್ನ ಪ್ರಿಯತಮೆ (ಸಂತ್ರಸ್ತೆ)ಯನ್ನು ಟೀ ತೋಟಕ್ಕೆ ಭೇಟಿಯಾಗಲೆಂದು ಕರೆದಿದ್ದಾನೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತನ್ನ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಈ ಸಂಬಂಧ ನಕ್ಸಲ್ಬರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿದ್ದಾರೆ.
ಬಂಧಿತರನ್ನು ಇಂದು ಬೆಳಗ್ಗೆ ಸಿಲಿಗುರಿ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಘಟನೆಯಲ್ಲಿ ಇನ್ನೂ ಕೆಲ ಯುವಕರು ಭಾಗಿಯಾಗಿರುವುದಾಗಿ ಕೇಳಿ ಬಂದಿದೆ.
ಪೊಲೀಸ್ ವರಿಷ್ಠಾಧಿಕಾರಿ ಹೇಳಿದಿಷ್ಟು: ಘಟನೆ ಬಗ್ಗೆ ಎಸ್ಪಿ ಪ್ರವೀಣ್ ಪ್ರಕಾಶ್ ಪ್ರತಿಕ್ರಿಯಿಸಿದ್ದು, ಘಟನೆ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದರಲ್ಲಿ ಇನ್ನೂ ಕೆಲ ಯುವಕರು ಭಾಗಿಯಾಗಿರುವುದಾಗಿ ಕೇಳಿ ಬಂದಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸದ್ಯ ಸಂತ್ರಸ್ತ ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.