ಮುಂಬೈ(ಮಹಾರಾಷ್ಟ್ರ): ಮದ್ಯಪಾನ ಮಾಡಿರುವ ಮಹಿಳೆಯೋರ್ವಳು ನಡುರಸ್ತೆಯಲ್ಲಿ ಪೊಲೀಸ್ ಅಧಿಕಾರಿ ಜೊತೆ ವಾಗ್ವಾದ ನಡೆಸಿದ್ದಾಳೆ. ಇದರ ಜೊತೆಗೆ ಅವರ ಕೊರಳಪಟ್ಟಿ ಹಿಡಿದು ಧಮ್ಕಿ ಹಾಕಿದ್ದಾಳೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಈ ಘಟನೆ ಯಾವಾಗ ಮತ್ತು ನಿಖರವಾಗಿ ಮುಂಬೈನ ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಕುಡಿದ ಗುಂಗಿನಲ್ಲಿ ಮೂವರು ಯುವತಿಯರು ರಸ್ತೆಯಲ್ಲೇ ಗಲಾಟೆ ಮಾಡಿದ್ದು, ಕಾರು ಚಾಲಕನನ್ನು ಹೊರಗೆಳೆದು, ಕಾರನ್ನು ತಮ್ಮ ವಶಕ್ಕೆ ಪಡೆದುಕೊಂಡು, ಧ್ವಂಸ ಮಾಡಲು ಯತ್ನಿಸಿದ್ದಾರೆ. ಈ ವಿಚಾರ ತಿಳಿದು ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿ ಬರುತ್ತಿದ್ದಂತೆ ಅವರ ಕೊರಳಪಟ್ಟಿ ಹಿಡಿದ ಯುವತಿಯೊಬ್ಬಳು ಆವಾಜ್ ಹಾಕಿದ್ದಾಳೆ. ಇಷ್ಟೇ ಅಲ್ಲ, ಅವರ ಬಳಿಯಿದ್ದ ಪಿಸ್ತೂಲ್ ಕಿತ್ತುಕೊಂಡು ಅನುಚಿತವಾಗಿ ವರ್ತಿಸಿದ್ದಾಳೆ.