ಹೈದರಾಬಾದ್(ತೆಲಂಗಾಣ):ಈ ಗೃಹಿಣಿಯ ಧೈರ್ಯ ಮೆಚ್ಚಲೇ ಬೇಕಾಗಿದೆ. ಕಣ್ಣಿಗೆ ಖಾರದ ಪುಡಿ ಎರಚಿ ಬಂಗಾರದ ತಾಳಿಯನ್ನು ಕದ್ದು ಹೋಗುತ್ತಿದ್ದ ಕಳ್ಳನನ್ನು ಗೃಹಿಣಿಯೊಬ್ಬಳು ಆತನ ಬೆಂಬಿಡದೇ ಹಿಡಿದಿರುವ ಪ್ರಸಂಗ ಬೆಳಕಿಗೆ ಬಂದಿದೆ. ಈ ಘಟನೆ ಹೈದರಾಬಾದ್ನ ಹೊರವಲಯದಲ್ಲಿರುವ ಹಯಾತ್ ನಗರದಲ್ಲಿ ನಡೆದಿದೆ.
ಏನಿದು ಪ್ರಕರಣ: ಸೂರ್ಯಪೇಟೆ ಜಿಲ್ಲೆ ಮೋಟೆ ತಾಲೂಕಿನ ಅಪ್ಪಣ್ಣಗುಡೆಂ ಗ್ರಾಮದ ಸಂಡ್ರಾ ಸಿರಿಶಾ ಮತ್ತು ನಾಗೇಶ್ ಹಯತ್‌ನಗರದ ಬೊಮ್ಮಲಗುಡಿ ಸಮೀಪದ ಬಾಲಾಜಿನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಮನೆ ಭಿಕ್ಷಾಮಯ್ಯ ಎಂಬುವವರದು. ಮನೆಯ ಮೊದಲ ಮಹಡಿ ಸಿಂಗಲ್ ಬಿಎಚ್ಕೆಯಲ್ಲಿ ಇವರು ತಂಗಿದ್ದಾರೆ. ಇವರ ಅಕ್ಕಪಕ್ಕದಲ್ಲಿ ಇನ್ನೆರಡು ಸಿಂಗಲ್ ಬೆಡ್ ರೂಂ ಖಾಲಿ ಇದ್ದುದರಿಂದ ಮನೆಯ ಮಾಲೀಕರು ಫೋನ್ ನಂಬರ್ ಇರುವ ಟು ಲೆಟ್ ಬೋರ್ಡ್ ಹಾಕಿದ್ದರು. ಆದರೆ, ಇತ್ತೀಚೆಗೆ ಭಿಕ್ಷಮಯ್ಯ ದಂಪತಿ ಮಧ್ಯಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಮಗನ ಬಳಿ ಹೋಗಿದ್ದರು.
ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಮನೆಯ ಮೇಲಿನ ಮಹಡಿಗೆ ಬಂದು ಬಾಡಿಗೆಗೆ ಮನೆಗಳು ಬೇಕಾಗಿತ್ತು ಎಂದು ಸಿರಿಶಾ ಅವರನ್ನು ಕೇಳಿದಾರೆ. ಆಗ ಆಕೆ ಮಾಲೀಕರು ಇಲ್ಲ ಎಂದು ಉತ್ತರಿಸಿದ್ದರು. ನಾನು ಮಾಲೀಕರಿಗೆ ಕರೆ ಮಾಡಿದ್ದೇನೆ. ಅವರು ಮನೆ ತೋರಿಸಲು ಹೇಳಿದ್ದಾರೆ ಅಂತಾ ಹೇಳಿದ್ದಾನೆ. ಅದರಂತೆ ಸಿರಿಶಾ ಮೊದಲು ಒಂದು ಮನೆ ತೋರಿಸಿದ್ದಾರೆ. ಬಳಿಕ ಇನ್ನೊಂದು ಮನೆ ತೋರಿಸಿ ಬಾಗಿಲು ಹಾಕುತ್ತಿರುವಾಗ ಕಳ್ಳ ಸಿರಿಶಾ ಕಣ್ಣಿಗೆ ಖಾರದ ಪುಡಿ ಎರಚಿ ಆಕೆಯ ಕೊರಳಿನಲ್ಲಿದ್ದ 30 ಗ್ರಾಂ ಬಂಗಾರದ ತಾಳಿಯನ್ನು ಕಿತ್ತುಕೊಂಡು ಕೆಳಗೆ ಓಡಿ ಹೋಗಿದ್ದಾನೆ.