ತಿರುವನಂತಪುರ(ಕೇರಳ):ಲಾಟರಿ ಟಿಕೆಟ್ ಹೊಡೆಯುವುದು ಅದೃಷ್ಟದ ಜೊತೆಗೆ ಸಮಸ್ಯೆಯನ್ನು ತರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಕೇರಳದ ಅನೂಪ್ ಎಂ. 31 ವರ್ಷದ ಅನೂಪ್ಗೆ 25 ಕೋಟಿ ಲಾಟರಿ ಹೊಡೆದು ಇದೀಗ ಕೋಟ್ಯಾಧಿಪತಿ ಆಗಿದ್ದಾರೆ. ರಾಜ್ಯ ಸರ್ಕಾರ ನಡೆಸುತ್ತಿರುವ ಲಾಟರಿ ವ್ಯವಹಾರದ ಏಜೆಂಟ್ ಆಗಿದ್ದ ಅನೂಪ್ಗೆ ಕೋಟಿ ಕೋಟಿ ಹಣದ ಜೊತೆ ಸಂಕಷ್ಟ ಕೂಡ ಎದುರಾಗಿದೆ. ಕಾರಣ, ಹಣ ಬಂದೊಡನೆ ಅವರಿಗೆ ಇದೀಗ ಗೊತ್ತಿರುವವರು, ಗೊತ್ತಿಲ್ಲದವರು ಆರ್ಥಿಕ ಸಹಾಯ ಕೋರಿ ದುಂಬಾಲು ಬೀಳುತ್ತಿದ್ದಾರೆ. ಇದರಿಂದ ರೋಸಿ ಹೋಗಿರುವ ಅನೂಪ್ ನಾನು ಈ ಹಣ ಗೆಲ್ಲದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಈತ ಇದೀಗ ಲಾಟರಿ ಏಜೆಂಟ್ ಆಗಿದ್ದು, ಎಂಎ ಲಾಟರಿ ಸೆಂಟರ್ ಎಂಬ ಮಳಿಗೆಯನ್ನು ತೆರೆದಿದ್ದ. ಕಳೆದ ವರ್ಷ ಅನೂಪ್ ಕೇರಳ ಲಾಟರಿ ಇತಿಹಾಸದಲ್ಲೇ ಬಂಪರ್ ಬಹುಮಾನ ಪಡೆದಿದ್ದರು. ತಿರುವೊಣಂ ಬಂಪರ್ನಲ್ಲಿ 25 ಕೋಟಿ ಗೆದ್ದ ಇವರಿಗೆ ಆರ್ಥಿಕ ಸಹಾಯ ಮಾಡು ಎನ್ನುವವರ ಸಂಖ್ಯೆಯೂ ಹೆಚ್ಚಾಗಿದೆ.
ಸಹಾಯಕ್ಕಾಗಿ ಜನರು ಇವರ ಮನೆ ಬಾಗಿಲ ಮುಂದೆ ಸಾಲು ಸಾಲು ನಿಲ್ಲುತ್ತಿರುವುದರಿಂದ ಅನೂಪ್ ಮನೆಯನ್ನು ಪದೇ ಪದೇ ಬದಲಾಯಿಸುವಂತೆ ಆಗಿದೆ. ಇದರ ಜೊತೆಗೆ ನಿಧಾನವಾಗಿ ಐಷಾರಾಮಿ ಜೀವನ ನಡೆಸಲು ಕೂಡ ಮುಂದಾಗಿದ್ದಾರೆ. ಯಾವುದು ಬದಲಾಗಿಲ್ಲ ಎಂದು ಮಾತು ಮುಂದುವರೆಸಿರುವ ಅನೂಪ್, ಆರ್ಥಿಕ ಸಹಾಯ ಕೋರಿ ಅನೇಕ ಪತ್ರ ಮತ್ತು ಜನರು ನನ್ನ ಬಳಿ ಬರುತ್ತಿದ್ದಾರೆ. ಇದರಿಂದ ರೋಸಿ ಹೋಗಿದ್ದೇನೆ ಎನ್ನುತ್ತಾರೆ. ಸದ್ಯ ಕೇರಳ ಸರ್ಕಾರದ ಒಡೆತನ ಲಾಟರಿ ವ್ಯವಹಾರದಲ್ಲಿ ಮಿನುಗುವ ನಕ್ಷತ್ರವಾಗಿ ಅನೂಪ್ ಎಲ್ಲರಿಗೂ ಕಾಣುತ್ತಿದ್ದಾರೆ.