ಹೈದರಾಬಾದ್ (ತೆಲಂಗಾಣ): ತೆಲಂಗಾಣದ ಹೈದರಾಬಾದ್ ಸಮೀಪ ಭೀಕರ ಹತ್ಯೆಯೊಂದು ನಡೆದಿದೆ. ತಾನು ಪ್ರೀತಿಸುತ್ತಿದ್ದ ಯುವತಿಗೆ ಆತ್ಮೀಯನಾಗಿದ್ದಾನೆ ಎಂಬ ಕೋಪದಿಂದ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ, ಹಂತಕ ಚಾಕುವಿನಿಂದ ರುಂಡ ಮತ್ತು ಮುಂಡವನ್ನು ಬೇರ್ಪಡಿಸಿದ್ದಾನೆ. ಹೃದಯ ಭಾಗವನ್ನು ಸೀಳಿ, ಮರ್ಮಾಂಗ ಕತ್ತರಿಸಿ ಅಟ್ಟಹಾಸ ಮೆರೆದಿದ್ದಾನೆ. ನಂತರ ಕೃತ್ಯದ ಫೋಟೋಗಳನ್ನು ಯುವತಿ ಮತ್ತು ಸ್ನೇಹಿತರಿಗೆ ಕಳುಹಿಸಿ ವಿಕೃತಿ ಮೆರೆದಿದ್ದಾನೆ.
ಹರಹರಕೃಷ್ಣ ಎಂಬ ಆರೋಪಿಯೇ ಈ ಘೋರ ಕೃತ್ಯ ಎಸಗಿದ್ದಾನೆ. ಕೊಲೆಯಾದ ಯುವಕನನ್ನು ನವೀನ್ (20) ಎಂದು ಗುರುತಿಸಲಾಗಿದೆ. ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆಬ್ರವರಿ 17ರಂದು ಈ ಭೀಭತ್ಸ ಘಟನೆ ನಡೆದಿದೆ. ಮತ್ತೊಂದೆಡೆ, ಅಂದಿನಿಂದ ನವೀನ್ ನಾಪತ್ತೆಯಾಗಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಆರಂಭಿಸಿದಾಗ ಈ ಕೊಲೆ ಪ್ರಕರಣ ಬಯಲಾಗಿದೆ. ಹೈದರಾಬಾದ್ ಮತ್ತು ಸಿಕಂದರಾಬಾದ್ ಅವಳಿ ನಗರದಲ್ಲಿ ಈ ಕೇಸ್ ಸಂಚಲನ ಮೂಡಿಸಿದೆ.
ನಡೆದಿದ್ದೇನು?:ಬೋಡುಪ್ಪಲ್‌ನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಅಂತಿಮ ವರ್ಷದಲ್ಲಿ ಹರಹರಕೃಷ್ಣ ಓದುತ್ತಿದ್ದ. ಇತ್ತ, ನಲ್ಗೊಂಡದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ನವೀನ್ ವಿದ್ಯಾಭ್ಯಾಸ ಮಾಡುತ್ತಿದ್ದ. ಆದರೆ, ಈ ಹಿಂದೆ ದಿಲ್‌ಸುಖ್‌ನಗರದ ಖಾಸಗಿ ಜೂನಿಯರ್ ಕಾಲೇಜಿನಲ್ಲಿ ಹರಹಕೃಷ್ಣ, ನವೀನ್ ಮತ್ತು ಓರ್ವ ಯುವತಿ ಸಹಪಾಠಿಗಳಾಗಿದ್ದರು. ನವೀನ್ ಮತ್ತು ಹರಹರಕೃಷ್ಣ ಇಬ್ಬರೂ ಈ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ, ಯುವತಿಗೆ ನವೀನ್ ಮೇಲೆ ಹೆಚ್ಚು ಒಲವು ಇತ್ತು. ಇದನ್ನು ಸಹಿಸಿಕೊಳ್ಳಲು ಆಗದೇ ಹರಹರಕೃಷ್ಣ ತನ್ನದೇ ಸ್ನೇಹಿತನಾದ ನವೀನ್ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತೆಯೇ, ಫೆಬ್ರವರಿ 17ರಂದು ಗೆಟ್ ಟುಗೆದರ್ ಇದೆ ಎಂದು ಕರೆ ಮಾಡಿ ನವೀನ್ನನ್ನು ಹರಹರಕೃಷ್ಣ ಕರೆಸಿಕೊಂಡಿದ್ದ. ಗೆಳೆಯ ಕರೆ ಮಾಡಿದ್ದರಿಂದ ನವೀನ್ ಸಂಜೆ ಬಂದಿದ್ದಾನೆ. ಆಗ ನೆಹರೂ ಹೊರ ವರ್ತುಲ ರಸ್ತೆ ಕಡೆ ಬರುವಂತೆ ಹರಹರಕೃಷ್ಣ ತಿಳಿಸಿದ್ದಾನೆ. ಅಂತೆಯೇ, ಬಂದ ಬಳಿಕ ನವೀನ್ನೊಂದಿಗೆ ಜಗಳ ತೆಗೆದಿದ್ದಾನೆ. ಇದರಿಂದ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಕೆಳಗೆ ಬಿದ್ದ ನವೀನ್ನನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹರಹರ ಕೃಷ್ಣ ಹತ್ಯೆ ಮಾಡಿದ್ದಾನೆ. ನಂತರ ತನ್ನೊಂದಿಗೆ ತಂದಿದ್ದ ಚಾಕುವಿನಿಂದ ಹಂತಕ ಹರಹರ ಕೃಷ್ಣ ರುಂಡ ಮತ್ತು ಮುಂಡವನ್ನು ಬೇರ್ಪಡಿಸಿದ್ದಾನೆ. ಇದಾದ ನಂತರ ಹೃದಯವನ್ನೂ ಸೀಳಿದ್ದು, ಕೈ ಬೆರಳುಗಳು ಮತ್ತು ಮರ್ಮಾಂಗ ಕತ್ತರಿಸಿ ಹಾಕಿದ್ದಾನೆ. ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?: ಇತ್ತ, ಫೆ.17ರಂದು ವಿಶ್ವವಿದ್ಯಾಲಯಕ್ಕೆ ತೆರಳಿದ್ದ ನವೀನ್ ಮರಳಿ ಮನೆಗೆ ಬಂದಿರಲಿಲ್ಲ. ನಂತರ ಎಲ್ಲೆಡೆ ವಿಚಾರಿಸಿದವರೂ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಫೆ.22ರಂದು ನವೀನ್ ಕಾಣೆಯಾಗಿದ್ದಾನೆ ಎಂದು ನಾರ್ಕಟಪಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರು ದಾಖಸಿಕೊಂಡ ಪೊಲೀಸರು ಹರಹರಕೃಷ್ಣನನ್ನು ವಿಚಾರಣೆಗೆ ನಡೆಸಿದಾಗ ಕೃತ್ಯ ಬಯಲಾಗಿದೆ. ಅಲ್ಲದೇ, ಆರೋಪಿಯು 2 ತಿಂಗಳ ಹಿಂದೆಯೇ ನವೀನ್ ಕೊಲೆ ಮಾಡಲೆಂದು ಚಾಕು ಖರೀದಿಸಿದ್ದ. ಸದ್ಯ ಆರೋಪಿ ವಿರುದ್ಧ ಕೊಲೆ, ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಪತ್ತೆ ಕಾಣೆಯಾದ ದಿನವೇ ಆತಕ ಚಿಕ್ಕಪ್ಪ ತೀರಿಕೊಂಡಿದ್ದರು. ನಾವು ಅವರ ಅಂತ್ಯಕ್ರಿಯೆಯಲ್ಲಿ ನಿರತರಾಗಿದ್ದೆವು. ನವೀನ್ ತನ್ನ ಸ್ನೇಹಿತರೊಂದಿಗೆ ಇದ್ದಾನೆ ಎಂದು ತಿಳಿದುಕೊಂಡಿದ್ದೆವು. ಆದರೆ, ನಂತರದಲ್ಲಿ ನವೀನ್ ಮನೆಗೆ ಮರಳಿಲ್ಲ. ಸ್ನೇಹಿತರನ್ನು ವಿಚಾರಿಸಿದ ನಂತರ ಫೆ.20ರಂದು ನಮಗೆ ಹರಹರಕೃಷ್ಣನ ನಂಬರ್ ಕೊಟ್ಟರು. ಅಂತೆಯೇ, ನಾವು ಆತನಿಗೆ ಕರೆ ಮಾಡಿದೆವು. ಆಗ ನನಗೆ ಗೊತ್ತಿಲ್ಲ ಎಂದು ಇದ್ದಕ್ಕಿದ್ದಂತೆ ಫೋನ್ ಕಟ್ ಮಾಡಿದ. ಮತ್ತೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಪ್ ಆಗಿತ್ತು. ಇದರಿಂದ ನಮಗೆ ಅನುಮಾನ ಬಂದು ಫೆ.22ರಂದು ಪೊಲೀಸರಿಗೆ ದೂರು ನೀಡಿದ್ದೆವು ಎಂದು ಮೃತನ ಸಂಬಂಧಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಪ್ರಾಂಶುಪಾಲೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಾಜಿ ವಿದ್ಯಾರ್ಥಿ: ಚಿಕಿತ್ಸೆ ಫಲಿಸದೆ ಸಾವು