ಚೆನ್ನೈ(ತಮಿಳುನಾಡು): ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಲಿಯೋ ಸಿನೆಮಾದ ಹಾಡು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ಸಿನೆಮಾ ಹಾಡಿನಲ್ಲಿ ಕಂಡು ಬಂದಿರುವ ದೃಶ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪೀಪಲ್ಸ್ ಪೊಲಿಟಿಕಲ್ ಪಾರ್ಟಿಯ ನಾಯಕಿ ರಾಜೇಶ್ವರಿ ಪ್ರಿಯಾ, ಈ ಸಂಬಂಧ ತಮಿಳುನಾಡು ಡಿಜಿಪಿಗೆ ದೂರು ನೀಡಿದ್ದು, ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಸಿನಿಮಾದಲ್ಲಿ ನಟ ವಿಜಯ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಲಿಯೋ ಚಿತ್ರದ 'ನಾ ರೆಡಿ ' ಹಾಡು ಬಿಡುಗಡೆಗೊಂಡಿತ್ತು. ಈ ಹಾಡಿನಲ್ಲಿ ನಟ ವಿಜಯ್ ಧೂಮಪಾನ ಮಾಡುವ ದೃಶ್ಯಗಳಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ಹಾಡಿನಲ್ಲಿ ನಟ ವಿಜಯ್ ನಟನೆ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜೇಶ್ವರಿ ಪ್ರಿಯಾ, ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದರು. ಈ ಸಂಬಂಧ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ರಾಜೇಶ್ವರಿ ಆರೋಪಿಸಿದ್ದಾರೆ. ಈ ಸಂಬಂಧ ಅವರು ಚೆನ್ನೈ ಡಿಜಿಪಿ ಕಚೇರಿಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ, ಪ್ರಕರಣದಕ್ಕೆ ಸಂಬಂಧಿಸಿದಂತೆ ನಟನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಜೇಶ್ವರಿ ಪ್ರಿಯಾ, ನಟ ವಿಜಯ್ ಅವರ ಲಿಯೋ ಸಿನೆಮಾದ ಹಾಡಿನಲ್ಲಿ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಟ್ಯಾಗ್ ಹಾಕಿಲ್ಲ. ಈ ಸಂಬಂಧ ನಾವು ಹಾಡನ್ನು ಖಂಡಿಸುತ್ತೇವೆ. ಇದು ಯುವಕರನ್ನು ದಾರಿ ತಪ್ಪಿಸುವಂತಿದೆ ಎಂದು ಹೇಳಿದ್ದಾರೆ.