ನವದೆಹಲಿ: ಅಂಧವಿಶ್ವಾಸದಲ್ಲಿ ಮುಳುಗಿದ್ದ ಮಹಿಳೆಯೊಬ್ಬಳು ತನಗೆ ಮಕ್ಕಳಾಗಲೆಂದು ಎರಡೂವರೆ ವರ್ಷದ ಬೇರೊಬ್ಬರ ಮಗುವೊಂದನ್ನು ಕೊಲೆ ಮಾಡಿರುವ ಘಟನೆ ರೋಹಿಣಿ ಸೆಕ್ಟರ್ನ ರಿಟಾಲಾ ನಗರದಲ್ಲಿ ನಡೆದಿದೆ.
ಪ್ರದೇಶದ ಕುಟುಂಬವೊಂದರ ಮಗು ಶನಿವಾರ ಬೆಳಗ್ಗೆಯಿಂದ ಕಾಣೆಯಾಗಿತ್ತು. ಪೋಷಕರು ಎಷ್ಟೋ ಸಮಯ ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ. ಬಳಿಕ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಾದ ನಂತರ ಮನೆಯ ಹಿಂದೆ ಮಗುವಿನ ಶವ ಪತ್ತೆಯಾಗಿತ್ತು.
ತನಗೆ ಮಕ್ಕಳಾಗೋದಕ್ಕೆ ಪಕ್ಕದ ಮನೆಯ ಮಗು ಬಲಿ ಪಡೆದ ಮಹಿಳೆ ತನಿಖೆ ಕೈಗೊಂಡ ರೋಹಿಣಿ ಸೆಕ್ಟರ್ ಪೊಲೀಸರು ನಗರದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ದೃಶ್ಯದಲ್ಲಿ ಪಕ್ಕದ ಮನೆಯ ಪೂಜಾ ಎಂಬ ಮಹಿಳೆ ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದರು.
ವಿಚಾರಣೆ ವೇಳೆ ಆರೋಪಿ ಪೂಜಾ ಹೇಳಿಕೆ ನೀಡಿದ್ದು, "ನನಗೆ ಮದುವೆಯಾಗಿ ಬಹಳ ವರ್ಷಗಳ ಕಳೆದಿವೆ. ಆದ್ರೂ ಸಹಿತ ನನಗೆ ಸಂತಾನ ಭಾಗ್ಯವಿಲ್ಲ. ನಾಲ್ಕು ವರ್ಷಗಳ ಹಿಂದೆ ತಾಂತ್ರಿಕನೊಬ್ಬನನ್ನು ನಾನು ಭೇಟಿ ಮಾಡಿದ್ದೆ. ಆತ ಮಗುವೊಂದನ್ನು ಬಲಿ ಕೊಟ್ರೆ ನಿನಗೆ ಸಂತಾನ ಭಾಗ್ಯ ದೊರೆಯುತ್ತದೆ ಎಂದು ಹೇಳಿದ್ದ. ಹೀಗಾಗಿ ನಾನು ಆ ಮಗುವನ್ನು ಬಲಿ ಕೊಟ್ಟಿದ್ದೇನೆ." ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆ.
ಪೊಲೀಸರು ಮಗುವಿನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಆರೋಪಿ ಪೂಜಾಳನ್ನು ಬಂಧಿಸಿದ್ದಾರೆ. ಈ ಘಟನೆ ಕುರಿತು ರೋಹಿಣಿ ಸೆಕ್ಟರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.