ಭುವನೇಶ್ವರಿ(ಒಡಿಶಾ):ಹುಟ್ಟುಹಬ್ಬದ ವೇಳೆ ಗದ್ದಲ ಮಾಡುತ್ತಿದ್ದುದನ್ನು ವಿರೋಧಿಸಿದ ಮಹಿಳೆ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಇಲ್ಲಿನ ಮಂಚೆಶ್ವರ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಡಿಸೆಂಬರ್ 11 ರಂದು ಈ ಘಟನೆ ನಡೆದಿದೆ. ಈ ಪ್ರಕರಣ ಸಂಬಂಧ ಸಂತ್ರಸ್ತ ಮಹಿಖೆ ದೂರು ದಾಖಲಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ದೆಬಶೀಸ್ ಪ್ರಧಾನ್, ದೀಪಕ್ ಕುಮಾರ್ ಸೆತಿ, ಸ್ವದೀನ್ ಕುಮಾರ್ ನಾಯಕ್ ಎಂದು ಗುರುತಿಸಲಾಗಿದೆ.
ಪ್ರಕರಣ ಹಿನ್ನೆಲೆ:ದೀಪಕ್ ಎಂಬಾತ ತನ್ನ ಗೆಳೆಯರೊಂದಿಗೆ ಕೂಡಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ. ಈ ವೇಳೆ ಜೋರು ಮ್ಯೂಸಿಕ್ ಹಾಕಿ ನೆರೆಹೊರೆಯವರಿಗೆ ಕಿರಿಕಿರಿ ಮಾಡಿದ್ದಾರೆ. ಆಗ ಪಕ್ಕದ ಮನೆ ಮಹಿಳೆ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಮೂವರು ಆರೋಪಿಗಳು ಮಹಿಳೆಯನ್ನು ಮನೆಯೊಳಗೆ ಎಳೆದು ತಂದು ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಸಂತ್ರಸ್ತೆಯ ಗಂಡ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.
ತಕ್ಷಣಕ್ಕೆ ಮಹಿಳೆ ಜೋರಾಗಿ ಕಿರುಚಿದ್ದು, ಸಹಾಯಕ್ಕೆ ಅಂಗಲಾಚಿದ್ದಾರೆ. ಮಹಿಳೆಯ ಕಿರುಚಾಟ ಕೇಳಿದ ಸ್ಥಳೀಯರು ಆಕೆಯ ನೆರವಿಗೆ ಧಾವಿಸಿ, ಆರೋಪಿಗಳನ್ನು ಹಿಡಿದಿದ್ದಾರೆ. ಈ ಘಟನೆಗೂ ಮುನ್ನ ಮಹಿಳೆಗೆ ಕೊಲೆ ಬೆದರಿಕೆಯನ್ನು ಆರೋಪಿಗಳು ಹಾಕಿದ್ದಾರೆ. ತಮ್ಮ ಅಪರಾಧವನ್ನು ಆರೋಪಿಗಳು ಒಪ್ಪಿಕೊಂಡಿದ್ದು, ಅವರನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇಬ್ಬರು ಹೆಣ್ಣುಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ.. ವಿಜಯಪುರ ಜಿಲ್ಲೆಯಲ್ಲಿ ದುರಂತ